ಮಡಿಕೇರಿ, ಜೂ. 12: ‘ಕೊಡಗಿನ ಬದುಕನ್ನೇ ಹಿಂಡುತ್ತಿರುವ ಕಾಡಾನೆ ಹಿಂಡು’ ಎಂಬ ಶಿರೋನಾಮೆಯ ಇಂದಿನ ‘ಶಕ್ತಿ’ ವರದಿಯು ಜಿಲ್ಲೆಯ ಜನತೆಯ ಕಣ್ತೆರೆಸಿದ್ದು, ಸೂಕ್ಷ್ಮ ಪರಿಸರ ತಾಣ ಜಾರಿಯ ಬಳಿಕ ಮತ್ತಷ್ಟು ಸಮಸ್ಯೆ ಉಲ್ಬಣಗೊಳ್ಳಲಿದ್ದು, ಇದರ ವಿರುದ್ಧ ರಕ್ತ ರಹಿತ ಕ್ರಾಂತಿಯ ಹೋರಾಟಕ್ಕೆ ಇಳಿಯಬೇಕೆಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಕರೆ ನೀಡಿದ್ದಾರೆ.

ಕೊಡಗಿನ ಬ್ರಹ್ಮಗಿರಿ, ತಲಕಾವೇರಿ, ಪುಷ್ಪಗಿರಿ ವಲಯಗಳು ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸಲ್ಪಟ್ಟು ಉಳಿದಂತೆ ಹಸಿರು ಪಟ್ಟಿಯ ಸಂರಕ್ಷಿತ ಅರಣ್ಯ ಹಾಗೂ ವನ್ಯಧಾಮಗಳಿಂದ ಜಿಲ್ಲೆಯ ಜನತೆ ಎಂತಹ ಭಯಾನಕ ಸನ್ನಿವೇಶ ಎದುರಿಸಬೇಕಾದೀತು ಎಂಬದಕ್ಕೆ ತಾ. 12ರ (ಇಂದಿನ) ‘ಶಕ್ತಿ’ ವರದಿ ಮುನ್ನೆಚ್ಚರಿಕೆ ಗಂಟೆಯಾಗಿದೆ ಎಂದು ಅವರು ಪತ್ರಿಕೆ ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

(ಮೊದಲ ಪುಟದಿಂದ) ಜಿಲ್ಲೆಯ ಯಾವದೇ ಗ್ರಾಮಗಳನ್ನು ಇಂದು ಕಾಡಾನೆಗಳು ಬಿಟ್ಟಿಲ್ಲವೆಂದು ನೆನಪಿಸಿದ ಅವರು, ಸೂಕ್ಷ್ಮ ಪರಿಸರ ವಲಯ ಅಥವಾ ಸಂರಕ್ಷಿತ ವನ್ಯಧಾಮದ ಹೆಸರಿನಲ್ಲಿ ಮಾನವನಿಗೆ ನಿರ್ಬಂಧ ವಿಧಿಸಲಾಗಿದ್ದು, ಕಾಡಿನಿಂದ ನಾಡಿಗೆ ಧಾಳಿಯಿಟ್ಟು ಮನುಷ್ಯನಿಗೆ ಸಂಚಕಾರ ತಂದೊಡ್ಡಿರುವ ಕಾಡಾನೆ ಸಹಿತ ವನ್ಯಮೃಗಗಳು ಇತ್ತ ಬಾರದಂತೆ ಯಾವದೇ ಕ್ರಮ ಇದುವರೆಗೆ ಸಾಧ್ಯವಾಗಿಲ್ಲ ವೆಂದು ಮೊಣ್ಣಪ್ಪ ಅಸಮಾಧಾನ ಹೊರಗೆಡವಿದ್ದಾರೆ.

ಇಂದು ಕೊಡಗು ಜಿಲ್ಲೆಯ ಉದ್ದಗಲಕ್ಕೂ ಮಾನವ ತನ್ನ ಬದುಕಿಗಾಗಿ ಒಂದಿಲ್ಲೊಂದು ರೀತಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಪ್ರತಿ ಹಂತದಲ್ಲಿ ಈಗಾಗಲೇ ವನ್ಯಮೃಗಗಳ ಉಪಟಳ ಎದುರಿಸುತ್ತಲೇ ಇದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ತನ್ನ ಜೀವ ರಕ್ಷಣೆಗಾಗಿ ಕೊಡಗನ್ನೇ ತೊರೆಯಬೇಕಾದೀತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಸೂಕ್ಷ್ಮ ಪರಿಸರ ವಲಯ ಕೇವಲ ಗ್ರಾಮಸ್ಥರಿಗೆ ಮಾತ್ರ ಸಂಕಷ್ಟವೆಂಬ ಭ್ರಮೆಯಿಂದ ಹೊರಬಂದು ಸಮಸ್ತ ಕೊಡಗಿನ ಜನತೆ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸಂಬಂಧಪಟ್ಟವರ ಕಣ್ತೆರೆಸುವ ಅಗತ್ಯವಿದೆ ಎಂದು ತಿಳಿಸಿರುವ ಮೊಣ್ಣಪ್ಪ, ಗ್ರಾಮೀಣ ಬದುಕಿಗೆ ಎದುರಾಗಲಿರುವ ಸಂಚಕಾರ ಪೇಟೆ - ಪಟ್ಟಣಗಳಿಗೂ ಈ ಜಿಲ್ಲೆಯಲ್ಲಿ ತಟ್ಟಲಿದೆ ಎಂದು ಭವಿಷ್ಯ ನುಡಿದಿದ್ದಾರೆ.