ಮಡಿಕೇರಿ, ಜೂ. 11: ಕೊಡಗಿನ ಕುಟ್ಟದಿಂದ ಕೊಡ್ಲಿಪೇಟೆ ಹಾಗೂ ಸಂಪಾಜೆ ಗಡಿಯಿಂದ ಶಿರಂಗಾಲ ಸರಹದ್ದು ಸಹಿತ ಅಲ್ಲಲ್ಲಿ ಹಿಂಡು ಹಿಂಡು ಸುಳಿದಾಡುತ್ತಾ, ಕೃಷಿ ಫಸಲು ನಾಶಗೊಳಿಸುವದರೊಂದಿಗೆ ಮಾನವನ ಬದುಕನ್ನೇ ಹಿಂಡುತ್ತಿರುವ ಕಾಡಾನೆಗಳು ಮನುಷ್ಯ ಜೀವನಕ್ಕೆ ಸಂಚಕಾರ ತಂದೊಡ್ಡುತ್ತಿವೆ.ಕಳೆದ ಮಾರ್ಚ್ 24 ರಂದು ತಿತಿಮತಿ ಬಳಿ ನೆಲ್ಲಿಕಾಡುವಿನಲ್ಲಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸಫಾನ ಎಂಬಾಕೆ, ಬೆಳ್ಳಂಬೆಳಗ್ಗೆ ಕಾಡಾನೆ ಧಾಳಿಗೆ ಬಲಿಯಾಗಿದ್ದಳು. ಇತ್ತ ಏಪ್ರಿಲ್ 9 ರಂದು 7ನೇ ಹೊಸಕೋಟೆ ನಿವಾಸಿ ಸರೋಜಮ್ಮ ಎಂಬವರು ಬೆಳಿಗ್ಗೆ 6 ಗಂಟೆ ಹೊತ್ತಿನಲ್ಲಿ ಮನೆ ಹಿಂಭಾಗದಲ್ಲಿ ಮುಸುರೆ ಚೆಲ್ಲಲು ಹೊರ ಬಂದು ಆನೆ ಧಾಳಿಯಿಂದ ಸಾವನ್ನಪ್ಪಿದ್ದರು. ಮೇ 28 ರಂದು ಕೆದಮುಳ್ಳೂರುವಿನ ತೋಟದಲ್ಲಿ ತಿಮ್ಮಯ್ಯ ಎಂಬವರು ಕಾಡಾನೆ ಧಾಳಿಯಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದರು.

ಹೀಗೆ ಮೇಲಿಂದ ಮೇಲೆ ಜಿಲ್ಲೆಯ ಅಲ್ಲಲ್ಲಿ ಕಾಡಾನೆ ಧಾಳಿಯಿಂದ ಮನುಷ್ಯ ಪ್ರಾಣ ಕಳೆದುಕೊಳ್ಳುತ್ತಿರುವ ದುರಂತ ಗೋಚರಿಸುತ್ತಿದ್ದರೆ, ಕಾಡಾನೆಗಳು ಹಿಂಡು ಹಿಂಡಾಗಿ ಸಂಚರಿಸುತ್ತಾ ಅಪಾರ ಕೃಷಿ ಫಸಲು ಹಾನಿಗೊಳಿಸಿ ರೈತರು ಹಾಗೂ ಕಾಫಿ ಬೆಳೆಗಾರರ ಬದುಕನ್ನೇ ಹಿಂಡಿ ಹಿಪ್ಪೆಯಂತೆ ಮಾಡುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡು ಬರುತ್ತಿದೆ.

ಈಚಿನ ವರದಿಗಳ ಪ್ರಕಾರ ಮಲ್ಲೂರು ಗ್ರಾಮದಲ್ಲಿ ಹೆಣ್ಣಾನೆ ಯೊಂದು ಕಾಡಿನಿಂದ ನಾಡಿಗೆ ಬಂದು, ಮಾರಣಾಂತಿಕ ಗಾಯ ಗೊಂಡು ಕೆರೆಯೊಳಗೆ ತಿಂಗಳು ಗಟ್ಟಲೆ ಜೀವನ್ಮರಣ ಹೋರಾಟ ನಡೆಸಿ, ಕೊನೆಗೂ ಸಾಕಾನೆಗಳ ನೆರವಿನಿಂದ ಹೊರಗೆಳೆದು ಈಗಷ್ಟೆ ಚಿಕಿತ್ಸೆ ನೀಡಲಾಗಿದೆ.

ಈ ಗಾಯಾಳು ಹೆಣ್ಣಾನೆ ಯೊಂದಿಗೆ ಕಾಡಾನೆ ಹಿಂಡು ಕೂಡ ಗ್ರಾಮದಲ್ಲಿ ಬೀಡು ಬಿಟ್ಟಿತ್ತು. ಇನ್ನೂ ಸಿದ್ದಾಪುರ, ನೆಲ್ಲಿಹುದಿಕೇರಿ, ಪಾಲಿಬೆಟ್ಟ, ಆನಂದಪುರ, ಅಮ್ಮತ್ತಿ, ಪುಲಿಯೇರಿ, ಬೆಟ್ಟದಕಾಡು, ಸಂಪಿಗೆಕೊಲ್ಲಿ, ಅತ್ತಿಮಂಗಲ, ನಲ್ವತ್ತೇಕ್ರೆ, ಅರೆಕಾಡು ಸುತ್ತಮುತ್ತ ಹದಿನೇಳಕ್ಕೂ ಅಧಿಕ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆ ಕಾರ್ಯಾ ಚರಣೆ ನಡೆಸಿ ಹಿಮ್ಮೆಟ್ಟಿಸಿದ ಬಳಿಕವೂ ಮತ್ತೆ ಅಲ್ಲಲ್ಲಿ ಕಾಣಿಸಿಕೊಳ್ಳತೊಡಗಿವೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಜೊತೆಗೆ ಸಿದ್ದಾಪುರ, ಮಾಲ್ದಾರೆ ಅರಣ್ಯ ವ್ಯಾಪ್ತಿಯಲ್ಲಿ ಪ್ರತ್ಯೇಕ 13 ಕಾಡಾನೆಗಳ ಹಿಂಡು ರೈತರ ತೋಟಗಳಲ್ಲಿ ಸುಳಿದಾಡುತ್ತ ಕೃಷಿ ಫಸಲು ನಾಶಗೊಳಿಸುತ್ತಿರುವ ದೂರುಗಳು ಕೇಳಿ ಬರುತ್ತಿವೆ.

ಉತ್ತರ ಕೊಡಗಿನ ಪುಷ್ಪಗಿರಿ ಶ್ರೇಣಿಯ ಕೂತಿ, ಕುಂದಳ್ಳಿ, ನಗರಳ್ಳಿ ಮುಂತಾದೆಡೆ ಪ್ರತ್ಯೇಕ ಗುಂಪುಗಳಲ್ಲಿ ಕಾಡಾನೆಗಳು ಮರಿ ಸಹಿತ ಸಂಚರಿಸುತ್ತಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ. ಇನ್ನೊಂದೆಡೆ ಐಗೂರು ಸುತ್ತಮುತ್ತ ಕಾಜೂರು, ಕೋವರ್‍ಕೊಲ್ಲಿ, ಬಾಣಾವರ ಸರಹದ್ದಿನಲ್ಲಿ ನಿರಂತರ ಕಾಡಾನೆಗಳು ಹೆದ್ದಾರಿಯಲ್ಲಿ ಕಾಣಿಸಿಕೊಳ್ಳುತ್ತಾ ಸಂಜೆಗತ್ತಲೆಯಲ್ಲಿ ವಾಹನಗಳ ಓಡಾಟಕ್ಕೂ ಅಡ್ಡಿಯಾಗಿವೆ.

ಈಚೆಗೆ ಆಲೂರು ಸಿದ್ದಾಪುರ ಮಾರ್ಗದಲ್ಲಿ ಬೆಳ್ಳಂಬೆಳಗ್ಗೆ 7 ಕಾಡಾನೆ ಗಳು ಮರಿ ಸಹಿತ ಕಾಣಿಸಿಕೊಂಡು ಅಲ್ಲಿನ ನಿವಾಸಿಗಳ ಜಂಘಾ ಬಲವನ್ನೇ ಉಡುಗಿಸಿದ್ದ ಪ್ರಸಂಗ ನಡೆದಿತ್ತು.

ಮರಂದೋಡ: ಚೆಯ್ಯಂಡಾಣೆ, ಚೇಲಾವರ, ಮರಂದೋಡ ವ್ಯಾಪ್ತಿಯಲ್ಲಿ ಆರೆಂಟು ಕಾಡಾನೆಗಳು ಸಂಚರಿಸುತ್ತಾ, ಭಯದ ವಾತಾವರಣ ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಮರಂದೋಡ ಸುತ್ತಮುತ್ತ ಜನ ಸಂಚರಿಸಲು ಹೆದರಿಕೊಂಡಿದ್ದು, ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಲ್ಲಿನ ರೈತರ ಕೃಷಿ ಫಸಲು ಬಾಳೆ ಇತ್ಯಾದಿಯನ್ನು ಕಾಡಾನೆಗಳು ಧ್ವಂಸಗೊಳಿಸಿರುವ ದೃಶ್ಯ ಗೋಚರಿಸಿದೆ.

12 ಕಾಡಾನೆಗಳು

ನಾಪೆÇೀಕ್ಲು: ಸಮೀಪದ ಯವಕಪಾಡಿ ಗ್ರಾಮದಲ್ಲಿ 12 ಕಾಡಾನೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರನ್ನು ಆತಂಕಗೀಡು ಮಾಡಿದೆ.

ಶನಿವಾರ ರಾತ್ರಿ ಗ್ರಾಮದ ಕೇಟೋಳಿರ ಸನ್ನಿ ಸೋಮಣ್ಣ, ಅಪ್ಪಾರಂಡ ಸಾಗರ್

(ಮೊದಲ ಪುಟದಿಂದ) ಮತ್ತಿತರರ ತೋಟಗಳಿಗೆ ಧಾಳಿ ಇಟ್ಟ ಕಾಡಾನೆಗಳು ಕಾಫಿ ಗಿಡ, ಬಾಳೆ, ಅಡಿಕೆ ಮರಗಳನ್ನು ಧ್ವಂಸಗೊಳಿಸಿವೆ. ಕಾಡಾನೆಗಳು ಅಲ್ಲಿಯೇ ಬೀಡು ಬಿಟ್ಟಿದ್ದು, ಕಾರ್ಮಿಕರು, ಜನ ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ರಸ್ತೆಯಲ್ಲಿ ಗಿರಿಜನರು ಹಾಗೂ ಅವರ ಮಕ್ಕಳು ಪಟ್ಟಣಕ್ಕೆ, ಶಾಲೆಗೆ ಬರಲು ಭಯ ಪಡುವಂತಾಗಿದೆ. ಆದುದರಿಂದ ಅರಣ್ಯ ಇಲಾಖೆ ಅನಾಹುತ ಸಂಭವಿಸುವ ಮೊದಲು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಂಟಿಕೊಪ್ಪ ಬಳಿಯ ಕೆದಕಲ್, ಹೊರೂರು, ಮೋದೂರು, ಹೆರೂರು, ಎಮ್ಮೆಗುಂಡಿ, ಕಂಬಿಬಾಣೆ, ಕೊಡಗರಳ್ಳಿ, ಹುದುಗೂರು ಸುತ್ತಮುತ್ತ ನಾಲ್ಕಾರು ಗುಂಪುಗಳಲ್ಲಿ ಸುಮಾರು 34 ಕಾಡಾನೆಗಳ ಹಿಂಡು ಸಣ್ಣ ಮರಿಗಳ ಸಹಿತ ಬೀಡುಬಿಟ್ಟಿವೆ ಎಂದು ಅಲ್ಲಿನ ಬೆಳೆಗಾರರು ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಮಾತನಾಡಿದ ಬೆಳೆಗಾರ ಸಿ.ಎ. ಸುಬ್ಬಯ್ಯ ಹಾಗೂ ಇತರರು ಕಾಡಾನೆಗಳು ಹಲಸು, ಬಾಳೆ ಇತ್ಯಾದಿ ಅರಸುತ್ತಾ ತೋಟಗಳಿಗೆ ಬರುತ್ತಿರುವದಾಗಿ ವಿವರಿಸಿದ್ದಾರೆ.

ಕಾಡಿನಲ್ಲಿ ಬಿದಿರು ನಾಶ ಆಹಾರ ಕೊರತೆಗೆ ಮುಖ್ಯ ಕಾರಣವೆಂದು ಅಭಿಪ್ರಾಯಪಟ್ಟಿರುವ ಬೆಳೆಗಾರರು, ತೋಟದ ನಡುವೆ ನುಸುಳಿ ಬರುವ ಕಾಡಾನೆಗಳು, ಆಯಾ ಸಮಯಕ್ಕೆ ಫಸಲು ಬಿಡುವ ಹಲಸಿನಂತಹ ಹಣ್ಣುಗಳನ್ನು ತಿನ್ನಲು ಮತ್ತೆ ಮತ್ತೆ ಧಾಳಿಯಿಡುತ್ತಿರುವದಾಗಿ ಬೊಟ್ಟು ಮಾಡಿದರು.

ಕಳೆದ ಹಲವು ಸಮಯದಿಂದ ಮರಿಗಳ ಹಿಂಡು ಸಹಿತ ಬೀಡು ಬಿಟ್ಟುರುವ ಕಾಡಾನೆಗಳು ಪಟಾಕಿ ಇತ್ಯಾದಿ ಶಬ್ದಕ್ಕೆ ಮರಿಗಳನ್ನು ಬಿಟ್ಟು ಕದಲುವದಿಲ್ಲವೆಂದು ವಿವರಿಸಿದರು. ಕಾಡಿನಿಂದ ತೋಟಗಳತ್ತ ಬರುವ ಹಿಂಡಿನಲ್ಲಿ ಹೆಣ್ಣಾನೆಗಳಿದ್ದು, ಮರಿ ಹಾಕಿದರೆ, ಕನಿಷ್ಟ 25 ದಿನಗಳ ತನಕ ಆ ಜಾಗ ಬಿಟ್ಟು ಹೋಗಲಾರವು ಎಂದು ನೆನಪಿಸಿದರು.

ಪ್ರಸಕ್ತ ನಾಲ್ಕೈದು ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳ ಹಿಂಡು ಅಪಾರ ಫಸಲು ನಷ್ಟಪಡಿಸಿ ದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಒತ್ತಾಯಿಸಿದರು.

ಆಹಾರ ಬೆಳೆಸಬೇಕು : ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಕಾಡಾನೆ ನಿಯಂತ್ರಣಕ್ಕೆ ರೂ. 500 ಕೋಟಿಗೂ ಅಧಿಕ ಹಣವನ್ನು ಕಂದಕ ನಿರ್ಮಿಸಲು ಅರಣ್ಯ ಇಲಾಖೆ ವೆಚ್ಚ ಮಾಡಿದ್ದಾಗಿ ಮಾಧ್ಯಮ ಹೇಳಿಕೆ ಉಲ್ಲೇಖಿಸಿದ ಬೆಳೆಗಾರರು, ಅನಾವಶ್ಯಕ ಹಣವನ್ನು ಈ ರೀತಿ ವ್ಯಯಿಸುವ ಬದಲು ಕಾಡಿನಲ್ಲಿ ಆನೆಗಳಿಗೆ ಆಹಾರ ಬೆಳೆಸುವಂತಾದರೆ ಹಾವಳಿ ತಡೆಯಲು ಸಾಧ್ಯವೆಂದು ಸಲಹೆ ನೀಡಿದರು.

ವರ್ಷದಿಂದ ವರ್ಷಕ್ಕೆ ಕೊಡಗಿನಲ್ಲಿ ಕೋಟಿ ಕೋಟಿ ಹಣ ಅರಣ್ಯ ಇಲಾಖೆಯಿಂದ ಆನೆ ಕಂದಕ ಹೆಸರಿನಲ್ಲಿ ವ್ಯಯವಾಗುತ್ತಿದ್ದರೂ, ಕಾಡಾನೆ ಉಪಟಳ ಹೆಚ್ಚುತ್ತಲೇ ಇದ್ದು, ಕೃಷಿಕರು ಮಾತ್ರ ಕಂಗಾಲಾಗುತ್ತಿದ್ದಾರೆ ಎಂದು ನೋವಿನಿಂದ ನುಡಿದರು.

ಆಕ್ರೋಶ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಬೆಳೆಗಾರ ರವಿ ಬಸಪ್ಪ ಮಾತನಾಡಿ, ಈಚೆಗೆ ನನ್ನ ತೋಟದಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅನೇಕ ಬಾರಿ ತಿಳಿಸಿದರೂ, ಸಂಬಂಧಪಟ್ಟವರು ಸ್ಪಂದಿಸಿಲ್ಲ ಎಂದು ದೂರಿದರಲ್ಲದೆ, ಕೊಡಗಿನಲ್ಲಿ ಕಾಡಾನೆಗಳಿಂದ ಬೆಳೆಗಾರರು ಅನುಭವಿಸುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೂಡ ಸಕಾಲದಲ್ಲಿ ಅರಣ್ಯ ಇಲಾಖೆ, ಕಲ್ಪಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. -ಶ್ರೀ ಸುತ