ಮಡಿಕೇರಿ, ಜೂ. 11: ನಾಡಿನ ಸುಭೀಕ್ಷೆಗಾಗಿ ಜೆಡಿಯು ರಾಜ್ಯ ನಾಯಕರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಜೆಡಿಯು ರಾಜ್ಯಾಧ್ಯಕ್ಷ ಡಾ. ಎಂ.ಪಿ ನಾಡಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಉಮೇಶ್ ಹಾಗೂ ಇತರರು ತ್ರಿವೇಣಿ ಸಂಗಮದಲ್ಲಿ ತಾಯಿ ಕಾವೇರಿಗೆ ಬಾಗಿನ ಅರ್ಪಿಸಿ ನಾಡಿನ ಸುಭೀಕ್ಷೆಗೆ ಪ್ರಾರ್ಥಿಸಿದರು. ಇದೇ ಸಂದರ್ಭ ಭಗಂಡೇಶ್ವರ ಸನ್ನಿಧಿಯಲ್ಲೂ ಜೆಡಿಯು ನಾಯಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಡಾ. ಎಂ.ಪಿ ನಾಡಗೌಡ, ರಾಜ್ಯದಲ್ಲಿ ಆಡಳಿತ ಹಾಗೂ ವಿಪಕ್ಷಗಳು ಜನರ ಆಶೋತ್ತರಕ್ಕೆ ಸ್ಪಂಧಿಸುವಲ್ಲಿ ವಿಫಲವಾಗುತ್ತಿದ್ದು, ರಾಜ್ಯದಲ್ಲಿ ಒಂದು ಪರ್ಯಾಯ ಶಕ್ತಿ ಇರಲೇಬೇಕು. ಈ ಹಿನ್ನಲೆ ರಾಜಕೀಯವಾಗಿ ಜೆಡಿಯುವನ್ನು ಬಲಪಡಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೆಡೆಗೆ ಬೊಟ್ಟು ಮಾಡುತ್ತಿದೆ. ಇದರ ನಡುವೆ ದೇಶದ ರೈತನ ಬೆನ್ನೆಲುಬೇ ಮುರಿದಂತಾಗಿದೆ. ಹೀಗಾಗಿ ಎಲ್ಲಾ ರೀತಿಯ ಸಾಲದಿಂದ ರೈತನನ್ನು ವಿಮುಕ್ತ ಮಾಡಬೇಕು ಎಂದು ಆಗ್ರಹಿಸಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿರುವಂತೆ ರಾಜ್ಯದಲ್ಲೂ ಮದ್ಯಪಾನ ನಿಷೇಧಿಸಬೇಕು. ಮದ್ಯಪಾನ ನಿಷೇಧಿಸಿದರೆ ಅದರಿಂದ ಬರುವ 15 ಸಾವಿರ ಕೋಟಿ ಆದಾಯ ನಷ್ಟವಾಗುತ್ತದೆ ಎನ್ನುವ

(ಮೊದಲ ಪುಟದಿಂದ) ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ಮದ್ಯಪಾನ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವದಿಲ್ಲ. ಮದ್ಯಪಾನಕ್ಕೆ ಸುರಿಯುವ ಹಣವನ್ನು ಜನರು ತಮ್ಮ ದಿನನಿತ್ಯದ ವಸ್ತುಗಳ ಖರೀದಿಗೆ ಬಳಸಿಕೊಳ್ಳುತ್ತಾರೆ. ಆ ಮೂಲಕ ಆ ಹಣ ಸರ್ಕಾರಕ್ಕೆ ಬರುತ್ತದೆ. ಇದೇ ಮಾದರಿಯನ್ನು ಬಿಹಾರ ಸರ್ಕಾರ ಅನುಸರಿಸಿದೆ ಎಂದು ಅವರು ಹೇಳಿದರು.

ಜೆಡಿಯು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 25 ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಸಿದ್ಧತೆ ನಡೆಸಿದೆ. 100 ಮಂದಿ ಜೆಡಿಯುನ ಸಕ್ರೀಯ ಕಾರ್ಯಕರ್ತರಿರುವ ಕ್ಷೇತ್ರದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು. ರಾಜ್ಯದಲ್ಲಿ ಪಕ್ಷದತ್ತ ಯುವಜನರು ಹೆಚ್ಚಾಗಿ ಬರುತ್ತಿದ್ದಾರೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ತಿಳಿಸಿದರು.

ಜೆಡಿಯು ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ಉಮೇಶ್ ಮಾತನಾಡಿ, ಚಲನಚಿತ್ರ ನಟ- ನಟಿಯರು ಮೃತಪಟ್ಟಾಗ ರಾಷ್ಟ್ರಧ್ವಜ ಹೊದಿಸುವದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದೇಶದ ಬೆನ್ನೆಲುಬು ರೈತರು ಸಮಾಜದ ತುಳಿತಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಾಗ 50-60 ಸಾವಿರ ನೀಡಿ ತಿರುಗಿಯೂ ನೋಡದೆ ಕೈತೊಳೆದುಕೊಳ್ಳುವ ಸರ್ಕಾರ, ಯೋಧರು ಹಾಗೂ ರೈತರ ಬಗ್ಗೆ ಇಲ್ಲದ ಕಾಳಜಿಯನ್ನು ಚಲನಚಿತ್ರ ನಟ-ನಟಿಯರಿಗೆ ತೋರುವದಕ್ಕೆ ತನ್ನ ವಿರೋಧವಿದೆ ಎಂದರು. ಈ ಸಂದರ್ಭ ಜೆಡಿಯು ಕೊಡಗು ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್, ಮಂಡ್ಯ ಜಿಲ್ಲಾಧ್ಯಕ್ಷ ಬಸವೇಗೌಡ, ಮುಖಂಡರಾದ ಸಂತೋಷ್, ಗೋವಿಂದರಾಜು, ವೆಂಕಟಸ್ವಾಮಿ, ದೊಡ್ಡಣ್ಣಯ್ಯ, ತೋಮಸ್, ಹಂಸ, ಸಾಜನ್, ನಾಸರ್, ಬಾರಿಕೆ ಲಕ್ಷ್ಮಿ ಮತ್ತಿತರರಿದ್ದರು.