ಮಡಿಕೇರಿ, ಜೂ. 11: ಇನ್ನು ಒಂದು ತಿಂಗಳು ಪೂರ್ಣಗೊಳ್ಳುವ ಮುನ್ನವಷ್ಟೇ ನಗರಸಭೆಯಿಂದ ರೂ. 4.75 ಲಕ್ಷದ ಕಾಮಗಾರಿಯನ್ನು ಇಲ್ಲಿನ ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ಖಾಸಗಿ ನಿಲ್ದಾಣಕ್ಕೆ ತೆರಳುವ ಪಾದಚಾರಿ ಮಾರ್ಗಕ್ಕೆ ನಿರ್ವಹಿಸಲಾಗಿತ್ತು.

ಆಗಲೇ ಸಾರ್ವಜನಿಕರು ಇದು ರೂ. 4.75 ಲಕ್ಷದ ಕಾಮಗಾರಿಯೇ? ಎಂದು ಹುಬ್ಬೇರಿಸಿದ್ದರು. ಅಷ್ಟರಲ್ಲಿ ಸುರಿದ ಒಂದೆರಡು ಮಳೆಗೆ ಮಾರ್ಗಬದಿ ಗುಂಡಿ ನಿರ್ಮಾಣ ಗೊಳ್ಳುವಂತಾಯಿತು. ಈಗ ಮತ್ತೆ ಕೆಲಸ ನಡೆಯುತ್ತಿದ್ದು, ಇದಕ್ಕೆ ವ್ಯಯಿಸುವ ಹಣವೆಷ್ಟು? ಎಂದು ತಿಳಿಯಬೇಕೆನಿಸಿತು.

ಈ ಬಗ್ಗೆ ಸಂಬಂಧಿಸಿದ ವಾರ್ಡ್ ಸದಸ್ಯ ಪ್ರಕಾಶ್ ಆಚಾರ್ಯ ಪ್ರತಿಕ್ರಿಯಿಸಿ, ಪಾದಚಾರಿ ಮಾರ್ಗದ ಸುರಕ್ಷತೆಗಾಗಿ ರೂ. 1.25 ಲಕ್ಷದಲ್ಲಿ ಕಾಂಕ್ರೀಟ್ ಕೆಲಸ ಮಾಡಿಸಲಾಗುತ್ತಿದೆ ಎಂಬದಾಗಿ ಸಮಜಾಯಿಷಿಕೆ ನೀಡಿದ್ದಾರೆ. ಈ ಕೆಲಸ ಪೂರ್ಣಗೊಳ್ಳುವ ಮುನ್ನವೇ ಮಳೆಯ ನೀರಿನಲ್ಲಿ ಎಲ್ಲವೂ ಹರಿದು ಹೋಗದಿರಲಿ ಎಂಬದು ನಾಗರಿಕರ ಆಶಯ. -ಮಿರರ್.