ಮಡಿಕೇರಿ, ಜೂ. 12: ಮಡಿಕೇರಿ ನಗರಸಭೆಯ ಕಾರ್ಯವೈಖರಿ ವಿರುದ್ಧ ಆಕ್ರೋಶಗೊಂಡು ಆಡಳಿತಾರೂಢ ಕಾಂಗ್ರೆಸ್‍ನ ಕೆಲ ಸದಸ್ಯರೇ ನಗರಸಭಾ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಆರಂಭದಲ್ಲೇ ಸದಸ್ಯರುಗಳಾದ ಉದಯಕುಮಾರ್, ಸವಿತಾ ರಾಕೇಶ್, ಅನಿತಾ ಪೂವಯ್ಯ, ತಜಸ್ಸುಂ, ಪೀಟರ್, ಯತೀಶ್ ಇವರುಗಳು ಅಧ್ಯಕ್ಷರ ಮೇಜಿನ ಬಳಿಗೆ ಬಂದು ಮಹದೇವಪೇಟೆಯಲ್ಲಿ ನಡೆಯಬೇಕಾಗಿರುವ ಇಂಟರ್‍ಲಾಕ್ ಹಾಗೂ ಕವರಿಂಗ್ ಸ್ಲ್ಯಾಬ್ ಕೆಲಸ ಹಲವು ತಿಂಗಳುಗಳಿಂದ ಬಾಕಿಯಿದ್ದು, ಅದನ್ನು ಯಾವಾಗ ಪೂರ್ಣಗೊಳಿಸುತ್ತೀರಿ ಎಂಬ ಬಗ್ಗೆ ಅಧ್ಯಕ್ಷರು ಹಾಗೂ ಆಯುಕ್ತರು ಖಚಿತಪಡಿಸಬೇಕು. ಇಲ್ಲವಾದರೆ ಸಭೆ ಮಾಡಲು ಬಿಡುವದಿಲ್ಲ ಎಂದು ಪಟ್ಟು ಹಿಡಿದರು. ಈ ಬಗ್ಗೆ ಚರ್ಚೆ ವಿಚರ್ಚೆ ನಡೆದು 1 ತಿಂಗಳೊಳಗಾಗಿ ಕಾಮಗಾರಿ ಮಾಡುವದಾಗಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹೇಳಿದಾಗ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ಪ್ರಕಾಶ್, ಟೆಂಡರ್ ಅವಧಿಯೇ 45 ದಿನಗಳಿರುವಾಗ ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸುವದು ಅಸಾಧ್ಯ. ವಿನಾಕಾರಣ ಪೊಳ್ಳು ಭರವಸೆಗಳನ್ನು ನೀಡಬೇಡಿ ಎಂದು ಹೇಳಿದರು. ಡಿಸೆಂಬರ್ ಒಳಗಾಗಿ ಕೆಲಸ ಪೂರ್ಣಗೊಳಿಸುವದಾಗಿ ಅಧ್ಯಕ್ಷರು ಆಶ್ವಾಸನೆಯಿತ್ತರು. ಉಪಾಧ್ಯಕ್ಷ

ಟಿ.ಎಸ್. ಪ್ರಕಾಶ್ ಮಾತನಾಡಿ, ಫಾರಂ-3ಯನ್ನು

(ಮೊದಲ ಪುಟದಿಂದ) ತಿಂಗಳೊಳಗಾಗಿ ವಿತರಿಸಲು ಕ್ರಮ ಕೈಗೊಳ್ಳುವದಾಗಿ ಕಳೆದ ಸಭೆಯಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಎಲ್ಲಾ ವಿಚಾರಗಳೂ ತನ್ನ ಗಮನಕ್ಕೆ ಬರುವದಿಲ್ಲ. ಆದರೆ ಅಧ್ಯಕ್ಷರಿಗೆ ಎಲ್ಲ ಕೆಲಸಗಳ ಬಗ್ಗೆ ಮಾಹಿತಿಯಿರುತ್ತದೆ. ಹೀಗಿದ್ದರೂ ಅಧಿಕಾರಿಗಳನ್ನು ಹಿಡಿತದಲ್ಲಿಟು ್ಟಕೊಂಡು ಕೆಲಸಗಳನ್ನು ಮಾಡಿಸಿ ಕೊಳ್ಳುವಲ್ಲಿ ಅಧ್ಯಕ್ಷರು ವಿಫಲರಾಗುತ್ತಿದ್ದಾರೆ. ಇದರಿಂದಾಗಿ ಆಡಳಿತ ವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು. ಪ್ರತಿಕ್ರಿಯಿಸಿದ ಕಾವೇರಮ್ಮ ಸೋಮಣ್ಣ, ನಾನು ನನ್ನಿಂದಾದ ಮಟ್ಟಿಗೆ ಕೆಲಸ ಮಾಡುತ್ತಿದ್ದೇನೆ. ಫಾರಂ ನಂ. 3ಯನ್ನು ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡಿಸುತ್ತಿದ್ದೇನೆ ಎಂದರು. ಹಾಗಿದ್ದಲ್ಲಿ ಫಾರಂ ನಂ. 3 ವಿತರಣೆ ಯಾವ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು.

ಕಾಂಗ್ರೆಸ್‍ನಿಂದಲೆ ಮುನ್ನೆಚ್ಚರಿಕೆ

ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಸದಸ್ಯ ಕೆ.ಎಂ. ಗಣೇಶ್ ಅಧ್ಯಕ್ಷರನ್ನು ಕುರಿತು, ನಿಮ್ಮ ಆಡಳಿತ ಸಂಪೂರ್ಣ ಹದಗೆಡುತ್ತಿದೆ. ಯಾವದನ್ನೂ ಸಮರ್ಥವಾಗಿ ನಿಭಾಯಿಸದೆ, ಮೌನ ವಹಿಸುತ್ತಿದ್ದೀರಾ. ನೀವು ಸಮರ್ಥವಾಗಿ ಕೆಲಸ ಮಾಡುತ್ತೀರ ಎಂಬ ನಂಬಿಕೆಯಿಂದ ನಾವು ನಿಮಗೆ ಮತ ನೀಡಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ನೀವು ಅದನ್ನು ಅರ್ಥೈಸಿಕೊಳ್ಳದೆ ಆಡಳಿತವನ್ನು ಉತ್ತಮವಾಗಿ ನಡೆಸುವಲ್ಲಿ ವಿಫಲರಾದರೆ ನಾವೇ ನಿಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗುತ್ತದೆ ಎಂದು ಹೇಳಿದರು. ಫಾರಂ ನಂ. 3 ಕಡತ ವಿಲೇವಾರಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಕಡತ ವಿಲೇವಾರಿ ಅಭಿಯಾನ ಕೈಗೊಳ್ಳುವದೊಳಿತು ಎಂದು ಸಲಹೆಯಿತ್ತರು. ಈ ಬಗ್ಗೆ ಚರ್ಚೆ ನಡೆದು ಫಾರಂ ನಂ. 3ಯನ್ನು ಶೀಘ್ರ ವಿತರಣೆ ಮಾಡದಿದ್ದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ತೀರ್ಮಾನಿಸಲಾಯಿತು.

ನಗರಸಭೆಗೊಳಪಟ್ಟ ಸ್ವಚ್ಛತಾ ಕಾರ್ಯ ಮಾಡುವ ವಾಹನಗಳಲ್ಲಿ ಟಯರ್ ಹಾಳಾಗಿವೆ. ಬ್ಯಾಟರಿ ಕೆಟ್ಟಿದೆ. ಬ್ರೇಕ್ ಕೂಡ ಇರುವದಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಸದಸ್ಯ ಪಿ.ಡಿ. ಪೊನ್ನಪ್ಪ ಪ್ರಶ್ನಿಸಿದರು. ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದರು.

ಸದಸ್ಯೆ ವೀಣಾಕ್ಷಿ, ಶ್ರೀಮತಿ ಬಂಗೇರ ಮಾತನಾಡಿ, ನಮ್ಮ ವಾರ್ಡ್‍ನ ಯಾವದೇ ಕೆಲಸಗಳನ್ನು ಕ್ರಿಯಾಯೋಜನೆಗೆ ಸೇರಿಸಿಲ್ಲ. ಉದ್ದೇಶಪೂರ್ವಕವಾಗಿಯೆ ನಮ್ಮ ವಾರ್ಡ್‍ಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಇದು ಸರಿಯಲ್ಲ. ಎಲ್ಲಾ ವಾರ್ಡ್‍ಗಳಿಗೂ ಸಮಾನ ಆದ್ಯತೆ ನೀಡುವಂತೆ ಸದಸ್ಯ ಗಣೇಶ್ ಸಲಹೆಯಿತ್ತರು.

ಮಡಿಕೇರಿಯಲ್ಲಿ ಜಾಂಡೀಸ್ ಕಾಣಿಸಿಕೊಂಡಿದ್ದು, ನಗರಸಭೆ ಏನು ಕ್ರಮಕೈಗೊಂಡಿದೆ? ಎಂದು ಸದಸ್ಯ ಮನ್ಸೂರ್ ಪ್ರಶ್ನಿಸಿದರು. ಜಾಂಡೀಸ್ ಹಿನ್ನೆಲೆ ನಗರದಲ್ಲಿ ಬೀದಿ ಬದಿಯ ಪಾನಿಪೂರಿ, ಗೋಬಿ ಮಂಚೂರಿ ಅಂಗಡಿಗಳನ್ನು ಮುಚ್ಚಿಸುವಂತೆ ಸದಸ್ಯ ಉಣ್ಣಿಕೃಷ್ಣ ಸಲಹೆಯಿತ್ತರು. ನಗರಸಭೆಯಿಂದ ಜಾಂಡೀಸ್‍ಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡಿದ್ದಾರೆ ಎಂದು ಸದಸ್ಯ ಕೆ.ಎಸ್. ರಮೇಶ್ ಹೇಳಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಮನ್ಸೂರ್ ಅಧಿಕಾರಿಗಳು ಆಜಾದ್ ನಗರ ಸೇರಿದಂತೆ ಯಾವದೇ ಮನೆಗಳಿಗೂ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ವಿನಾಕಾರಣ ಸುಳ್ಳು ಹೇಳಿ ಅಧಿಕಾರಿಗಳ ಪರ ಮಾತನಾಡಿಬೇಡಿ, ಇದು ಜನರ ಆರೋಗ್ಯದ ವಿಚಾರ ಎಂದು ಸದಸ್ಯ ಅಮೀನ್ ಮೊಯ್ಸಿನ್, ಕೆ.ಎಸ್. ರಮೇಶ್ ಅವರಿಗೆ ಪ್ರತಿಕ್ರಿಯಿಸಿದರು. ನಗರ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸಮರ್ಪಕವಾಗದೆ ಅಲ್ಲಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸದಸ್ಯ ಉದಯಕುಮಾರ್ ಹೇಳಿದರು. ಖಾಸಗಿಯವರಿಗೆ ಕುರಿ, ಕೋಳಿ ಪರವಾನಗಿ ಶುಲ್ಕವಾಗಿ 50,000 ರೂ. ನಿಗದಿ ಮಾಡುವಂತೆ ಉಪಾಧ್ಯಕ್ಷ ಪ್ರಕಾಶ್ ಹಾಗೂ ಸದಸ್ಯ ಉದಯಕುಮಾರ್ ಹೇಳಿದರು.