ಮಡಿಕೇರಿ, ಜೂ. 11: ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪತ್ರಿಕಾಭವನದಲ್ಲಿಂದು ನಡೆಯಿತು.

ಸಂಘದ ಅಧ್ಯಕ್ಷ ಅಜ್ಜಾಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಏಳಿಗೆ ಬಗ್ಗೆ ಚರ್ಚೆ ವಿಚರ್ಚೆಗಳು ನಡೆದವು. ಸಂಘದ ವಾರ್ಷಿಕ ವರದಿ, ಲೆಕ್ಕ ಪತ್ರಗಳ ಮಂಡನೆ ಮಾಡಲಾಯಿತು.

ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕ್ರೀಡಾ ವರದಿ ಹಾಗೂ ತೋಟಗಾರಿಕಾ ವರದಿ ಪ್ರಶಸ್ತಿ ಪಡೆದ ‘ಶಕ್ತಿ’ ಉಪ ಸಂಪಾದಕ ಕಾಯಪಂಡ ಶಶಿ ಸೋಮಯ್ಯ, ಅತ್ಯುತ್ತಮ ಅರಣ್ಯ ವನ್ಯಜೀವಿ ವರದಿ ಹಾಗೂ ಶೈಕ್ಷಣಿಕ ವರದಿ ಪ್ರಶಸ್ತಿ ಪಡೆದ ‘ಶಕ್ತಿ’ ಕುಶಾಲನಗರ ವಿಭಾಗದ ವರದಿಗಾರ ಎಂ.ಎನ್. ಚಂದ್ರಮೋಹನ್, ಅತ್ಯುತ್ತಮ ರಾಜಕೀಯ ವರದಿ ಗ್ರಾಮೀಣ ವರದಿ ಪ್ರಶಸ್ತಿ ಪಡೆದ ಅಲ್ಲಾರಂಡ ವಿಠಲ ನಂಜಪ್ಪ, ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿ ಪಡೆದ ಟಿವಿ 9 ವಾಹಿನಿಯ ನವೀನ್ ಸುವರ್ಣ, ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ ಪಡೆದ ಪ್ರಜಾಸತ್ಯ ವರದಿಗಾರ ಹೆಚ್.ಜೆ. ರಾಕೇಶ್, ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿ ಪಡೆದ ಕೊಡಗು ಧ್ವನಿ ಪತ್ರಿಕೆಯ ಹೆಚ್.ಕೆ. ಜಗದೀಶ್, ಅತ್ಯುತ್ತಮ ಆರೋಗ್ಯ ವರದಿ ಹೈನುಗಾರಿಕೆ ವರದಿ ಪ್ರಶಸ್ತಿ ಪಡೆದ ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಹೆಚ್.ಟಿ. ಅನಿಲ್, ಆಲ್ಪೆನ್ ಗ್ಲೋ ಸುದ್ದಿ ಛಾಯಚಿತ್ರ ಪ್ರಶಸ್ತಿ, ಅತ್ಯುತ್ತಮ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿ ಪಡೆದ ಕನ್ನಡ ಪ್ರಭಾ ವರದಿಗಾರ ವಿಘ್ನೇಶ್ ಭೂತನಕಾಡು, ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿ ಪಡೆದ ಟಿವಿ 9ನ ಕೆ.ಬಿ. ಮಂಜುನಾಥ್, ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಪಡೆದ ವಿಜಯವಾಣಿ ವರದಿಗಾರ ಹಿರಿಕರ ರವಿ ಇವರುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಭಿವೃದ್ಧಿ ಕೆಲಸಕ್ಕೆ ಸಹಕಾರ

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯ ದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ಕೊಡಗು ತನ್ನ ತವರು ಜಿಲ್ಲೆ ಎಂಬ ಅಭಿಮಾನ ದೊಂದಿಗೆ ಸಚಿವರ ಅಪೇಕ್ಷೆಯಂತೆ ತಾನು ಕೊಡಗಿಗಾಗಿ ಕೆಲಸ ಮಾಡುತ್ತಿದ್ದೇನೆ.

(ಮೊದಲ ಪುಟದಿಂದ) ಮುಂದೆಯೂ ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ತನ್ನ ಸಹಕಾರವಿದೆ ಎಂದು ಹೇಳಿದರು.

ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಮಾತನಾಡಿ, ಕೊಡಗಿನ ಉಳಿವಿನಲ್ಲಿ ಪತ್ರಕರ್ತರ ಪಾತ್ರ ಬಹಳಷ್ಟಿದ್ದು, ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಪತ್ರಕರ್ತರು ಗಮನ ಹರಿಸಬೇಕೆಂದು ಸಲಹೆಯಿತ್ತರು.

ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಸಂವಿಧಾನದಲ್ಲಿ ಪ್ರಮುಖ ಅಂಗಗಳಲ್ಲೊಂದಾದ ಪತ್ರಿಕಾರಂಗ ತನ್ನದೇ ಆದ ಗೌರವ ಹೊಂದಿದೆ ಎಂದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಅಭಿಪ್ರಾಯಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ವೇದಿಕೆಯಲ್ಲಿದ್ದರು. ಅಜ್ಜಾಮಾಡ ರಮೇಶ್ ಕುಟ್ಟಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭ ಬಿ.ಎಸ್. ತಮ್ಮಯ್ಯ, ಕೊಲ್ಯದ ಗಿರೀಶ್, ಮನು ಸೋಮಯ್ಯ, ಹರೀಶ್ ಬೋಪಣ್ಣ ಇವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಪ್ರಧಾನ ಕಾರ್ಯದರ್ಶಿ ಕುಡೆಕಲ್ ಸಂತೋಷ್ ನಿರೂಪಿಸಿ, ಉಪಾಧ್ಯಕ್ಷ ರವಿ ಸುಬ್ಬಯ್ಯ ಸ್ವಾಗತಿಸಿ ವಂದಿಸಿದರು.