ಮಡಿಕೇರಿ, ಜೂ. 11: ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಸುಧಾರಣೆ ಕಂಡುಬರದಿದ್ದರೆ, ಅಂತಹ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದಿದ್ದಲ್ಲಿ, ಅಂತಹ ಶಾಲೆಗಳ ಮುಖ್ಯೋಪಾಧ್ಯಾಯರ ವಿರುದ್ಧವೂ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಎಚ್ಚರಿಕೆ ನೀಡಿದ್ದಾರೆ.

ನಗರದ ಸಂತ ಮೈಕಲರ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಶೇ. 100 ರಷ್ಟು ಫಲಿತಾಂಶ ಪಡೆದಿರುವ ಶಾಲೆಯ ಮುಖ್ಯಸ್ಥರಿಗೆ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಜಿಲ್ಲೆಯ ಅನುದಾನಿತ ಕೆಲವು ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ. 50 ಕ್ಕಿಂತ ಕಡಿಮೆ ಇದೆ. ಇಂತಹ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವದು. ಜೊತೆಗೆ ಅಂತಹ ಶಾಲೆಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಯೋಚಿಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊರಾರ್ಜಿ ದೇಸಾಯಿ ಶಾಲೆಗಳು ಸೇರಿದಂತೆ ವಸತಿ ಶಾಲೆಗಳಲ್ಲಿ ಶೇ. 100 ರಷ್ಟು ಫಲಿತಾಂಶ ಕಡ್ಡಾಯವಾಗಿ ಬರಬೇಕು. ಆದರೆ ಕೆಲವು ವಸತಿ ಶಾಲೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಆದ್ದರಿಂದ ಅಂತಹ ಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

‘ಶಿಕ್ಷಣ ಸಂಸ್ಥೆಗಳು ಲಾಭ ಮಾಡುವ ಸಂಸ್ಥೆಗಳಲ್ಲ. ಬದಲಾಗಿ ಸೇವೆ ಮಾಡುವ ಸಂಸ್ಥೆಗಳಾಗಿವೆ ಎಂಬದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.’

ಶಾಲೆಗಳಿಗೆ ಮಕ್ಕಳು ಸರಿಯಾಗಿ ಬರುವದಿಲ್ಲ ಎಂಬದನ್ನು ಹೇಳಬೇಡಿ. ಮಕ್ಕಳನ್ನು ಶಾಲೆಗೆ ಕರೆತರುವದು ಹಾಗೂ ಪೋಷಕರಲ್ಲಿ ಮನವರಿಕೆ ಮಾಡುವದು ಶಿಕ್ಷಕರ ಜವಾಬ್ದಾರಿಯಾಗಿದೆ. ಸರ್ಕಾರ ಹಸಿವು ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ಜಾರಿಗೊಳಿಸಿದೆ. ಶಾಲೆಗಳಲ್ಲಿ ಕ್ಷೀರಭಾಗ್ಯ, ಶೂ ಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ಬೈಸಿಕಲ್, ಹಾಗೆಯೇ ಶಾಲೆಗೆ ಪ್ರತಿದಿನ ವಿದ್ಯಾರ್ಥಿನಿಯರು ಹಾಜರಾಗಲು ಪ್ರೋತ್ಸಾಹ ಧನ ನೀಡಲಾಗುತ್ತದೆ ಹೀಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ಶಾಲೆಗೆ ವಿದ್ಯಾರ್ಥಿಗಳು ಬರುವದಿಲ್ಲ ಎಂದು ಹೇಳಿದರೆ ಹೇಗೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು, ಆಡಳಿತ ವ್ಯವಸ್ಥೆ ಹೀಗೆ ಎಲ್ಲರೂ ಜವಾಬ್ದಾರರಾಗಿದ್ದಾರೆ. ಪಟ್ಟಣದಲ್ಲಿ ಇರುವ ಕೆಲವು ಶಾಲೆಗಳು ಕಡಿಮೆ ಫಲಿತಾಂಶ ಹೊಂದಿರುವದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ 14 ವರ್ಷದೊಳಗಿನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಮಕ್ಕಳು ಶಾಲೆಗೆ ಸರಿಯಾಗಿ ಹಾಜರಾಗದಿದ್ದರೆ ಪೋಷಕರ ಗಮನಕ್ಕೆ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಬಾರ ಉಪ ನಿರ್ದೇಶಕ ಮಲ್ಲೇಸ್ವಾಮಿ, ಡಯಟ್ ಉಪನ್ಯಾಸಕ ಬೊಮ್ಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಭಾಗ್ಯಲಕ್ಷ್ಮಿ, ವಿಷಯ ಪರಿವೀಕ್ಷಕರಾದ ದೇವನಾಯಕ್, ಸಾವಿತ್ರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜೋಯಪ್ಪ ಮತ್ತಿತರರು ಹಾಜರಿದ್ದರು.