*ಗೋಣಿಕೊಪ್ಪಲು, ಜೂ. 11: ಸೂಕ್ಷ್ಮ ಪರಿಸರ ವಲಯದ ವಿಚಾರದಲ್ಲಿ ಶಾಸಕರು ಹಾಗೂ ಸಂಸದರ ವಿರುದ್ಧ ಕಾಂಗ್ರೆಸ್ಸಿಗರು ಆರೋಪ ಮಾಡಿರುವದು ಖಂಡನೀಯ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ತಿಳಿಸಿದ್ದಾರೆ.

ಸೂಕ್ಷ್ಮ ಪರಿಸರ ವಲಯ ಯೋಜನೆ ಇವತ್ತಿನದಲ್ಲ. ಕೇಂದ್ರ ಸರಕಾರ ಈ ಯೋಜನೆ ಜಾರಿಗೊಳಿಸಲು ಹೊರಟಾಗ ಜಿಲ್ಲೆಯ ಇಬ್ಬರು ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ತೀವ್ರ ವಿರೋಧ ವ್ಯಕ್ತಪಡಿಸಿ, ಯೋಜನೆ ವಿರುದ್ಧ ಜಿಲ್ಲೆಯಾದ್ಯಂತ ಹೋರಾಟ ರೂಪಿಸಿದ್ದರು.

ಸೂಕ್ಷ್ಮ ಪರಿಸರ ವಲಯದ ವಿಸ್ತೀರ್ಣವನ್ನು ಅರಣ್ಯ ಪ್ರದೇಶಕ್ಕೆ ಸೀಮಿತಗೊಳಿಸಲು ಇಬ್ಬರೂ ಶಾಸಕರು ಸದನದ ಒಳಗೂ-ಹೊರಗೂ ಹೋರಾಟ ಮಾಡಿದ್ದಾರೆ. ಈಗ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯ ಬ್ರಹ್ಮಗಿರಿ ಮತ್ತು ತಲಕಾವೇರಿ ವನ್ಯಜೀವಿ ತಾಣವನ್ನು ಸೂಕ್ಷ್ಮ ಪರಿಸರ ವಲಯವಾಗಿ ಘೋಷಿಸಿದೆ.

ಸೂಕ್ಷ್ಮ ಪರಿಸರ ತಾಣದ ಮಿತಿಯನ್ನು ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಇದರ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಮೈಸೂರಿನ ಪ್ರಾದೇಶಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಕ್ಷೇತ್ರ ಶಾಸಕರು, ಕರ್ನಾಟಕ ಸರ್ಕಾರದ ಪರಿಸರ ಇಲಾಖೆಯ ಪ್ರತಿನಿಧಿ, ಕೊಡಗು ಜಿಲ್ಲಾಧಿಕಾರಿ ಅಥವಾ ಅವರ ಪ್ರತಿನಿಧಿ, ರಾಜ್ಯ ಪರಿಸರ ಇಲಾಖೆಯ ಪೌರಾಭಿವೃದ್ಧಿ ಇಲಾಖೆಯ, ಮಾಲಿನ್ಯ ನಿಯಂತ್ರಣ ಮಂಡಳಿಯ ಒಬ್ಬೊಬ್ಬ ಪ್ರತಿನಿಧಿ ಇದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕರ ಬಗ್ಗೆ ಟೀಕಿಸುವ ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮದೇ ಸರ್ಕಾರದ ಮೇಲೆ ಒತ್ತಡ ತಂದು ಬಫರ್‍ಜೋನ್ ವ್ಯಾಪ್ತಿಯನ್ನು ಶೂನ್ಯಕ್ಕೆ ಸೀಮಿತಗೊಳಿಸಲಿ. ರಾಜ್ಯ ಸರ್ಕಾರದಿಂದ ಯೋಜನೆ ಅನುಷ್ಠಾನ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎನ್ನುವದು ಶುದ್ಧ ಸುಳ್ಳು. ರಾಜ್ಯದ ಅರಣ್ಯ ಸಚಿವರು ಸ್ವತಃ ಯೋಜನೆಗೆ ಒಪ್ಪಿಗೆ ಇದೆ ಎಂದು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ. ಕೇರಳ ರಾಜ್ಯ ಸರ್ಕಾರ ಪ್ರತಿ ಗ್ರಾಮದ ದೈಹಿಕ ಪರಿಶೀಲನೆ ಮಾಡಿ ವರದಿ ಸಲ್ಲಿಸಿ ಜನವಸತಿ ಪ್ರದೇಶಗಳಿಗೆ ರಿಯಾಯಿತಿ ಪಡೆದುಕೊಂಡಿದೆ. ನಮ್ಮ ರಾಜ್ಯ ಸರ್ಕಾರ ಯಾವದೇ ಅಂತಹ ವರದಿ ಕಳಿಸಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.