ಮಡಿಕೇರಿ, ಜೂ. 12: ಕೊಡಗು ಜಿಲ್ಲೆಯಲ್ಲಿ ಆಶಾದಾಯಕ ಮಳೆ ಪ್ರಾರಂಭಗೊಂಡಿದ್ದು, ಈಗಾಗಲೇ ಕಾಯಕ ನಿರತರಾಗಿರುವ ಅನ್ನದಾತ ರೈತರು ಮುಂಗಾರುವಿನ ಬೆಳೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಜಿಲ್ಲೆಯಾಧ್ಯಂತ ಮಳೆಯ ಬೆನ್ನಲ್ಲೇ ಗದ್ದೆಗಳ ಉಳುಮೆಯಲ್ಲಿ ತೊಡಗಿಸಿಕೊಂಡಿರುವ ರೈತರು, ಬಿತ್ತನೆ ಕೆಲಸದಲ್ಲಿ ಮುಂದಾಗಿದ್ದಾರೆ.ಜಿಲ್ಲೆಯ ಗ್ರಾಮೀಣ ಭಾಗದ ಗದ್ದೆಗಳ ಉಳುಮೆಯೊಂದಿಗೆ, ಸಸಿ ಮಡಿಗಳನ್ನು ರೂಪಿಸಲು ಬಿತ್ತನೆಯಲ್ಲಿ ನಿರತರಾಗಿರುವ ರೈತರು ತಮ್ಮ ತಮ್ಮ ಗದ್ದೆಗಳಲ್ಲಿ ಹಸಿರುಗೊಬ್ಬರ ಮಿಶ್ರಣಕ್ಕಾಗಿ ಕೃಷಿ ಇಲಾಖೆಯಿಂದ ಸಹಾಯಧನದೊಂದಿಗೆ ಲಭ್ಯವಿರುವ ಹಸಿರೆಲೆಗಳ ಬೀಜ ಬಿತ್ತನೆಗೆ ಮುಂದಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಹೆಕ್ಟೇರ್ ಕೃಷಿ ಭೂಮಿ ಕಾಯಕ ಬೇರೆ ಬೇರೆ ಕಾರಣಗಳಿಂದ ಸ್ಥಗಿತಗೊಂಡಿದೆ. ಪ್ರಸಕ್ತ ಸಾಲಿನಲ್ಲಿ 30 ಸಾವಿರದ ಐದುನೂರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಕೃಷಿ ಸಹಾಯಕ ತಾಂತ್ರಿಕ ಅಧಿಕಾರಿ ಬಿ.ಎಸ್. ರಮೇಶ ತಿಳಿಸಿದ್ದಾರೆ.

(ಮೊದಲ ಪುಟದಿಂದ) ಅಲ್ಲದೆ ಜಿಲ್ಲೆಯ ಬಯಲು ಸೀಮೆಗಳಲ್ಲಿ 4 ಸಾವಿರ ಹೆಕ್ಟೇರ್‍ನಲ್ಲಿ ಮುಸುಕಿನ ಜೋಳವನ್ನು ಕೃಷಿ ಮಾಡಲಾಗುತ್ತಿದ್ದು, ಈಗಾಗಲೇ ಹೊಲಗಳಲ್ಲಿ ಉಳುಮೆ ಕೆಲಸ ಪೂರೈಸಿರುವ ಕೃಷಿಕರು 1350 ಹೆಕ್ಟೇರ್‍ನಷ್ಟು ಮುಸುಕಿನ ಜೋಳ ಬಿತ್ತನೆ ಕೆಲಸ ಪೂರೈಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಂಬಾಕು ಕ್ಷೀಣ: ಅನೇಕ ವರ್ಷಗಳಿಂದ ಕುಶಾಲನಗರ ಸುತ್ತಮುತ್ತಲಿನ ಕೆಲವು ರೈತರು ತಂಬಾಕು ಬೆಳೆ ಅವಲಂಬಿಸಿದ್ದು, ಇತ್ತೀಚಿನ ವರ್ಷಗಳಲ್ಲಿ ಕೊಡಗಿನ ರೈತರು ಅತ್ತ ಕಾಯಕವನ್ನು ಬಿಡುತ್ತಿರುವದಾಗಿ ಕೃಷಿ ಅಧಿಕಾರಿ ತಿಳಿಸಿದರು. ಈ ಹಿಂದೆ 250 ಹೆಕ್ಟೇರ್ ತಂಬಾಕು ಬೆಳೆಯುತ್ತಿದ್ದವರು, ಕಳೆದ ಸಾಲಿನಲ್ಲಿ ಕೇವಲ 27 ಹೆಕ್ಟೇರ್ ಕೃಷಿ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಇದುವರೆಗೆ ತಂಬಾಕು ಕೃಷಿಗೆ ಯಾರೂ ಮುಂದಾಗಿಲ್ಲ ಎಂದರು.

34500 ಹೆಕ್ಟೇರ್: ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೃಷಿ ಒಟ್ಟಾರೆ 34500 ಹೆಕ್ಟೇರ್ ಗುರಿಯಿದ್ದು, ಈ ಪೈಕಿ 28100 ಹೆಕ್ಟೇರ್ ಭತ್ತ ಬೆಳೆಯಲಾಗುವದು ಎಂದು ಅಂದಾಜಿಸಲಾಗಿದೆ. ಉಳಿದಂತೆ ಮುಸುಕಿನ ಜೋಳ ಕೃಷಿ ಸಾಗಿದೆ.

ತಾಲೂಕುವಾರು : ಮಡಿಕೇರಿ ತಾಲೂಕಿನಲ್ಲಿ ಮುಂಗಾರು ಮಳೆ ಅವಲಂಬಿತ 6500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ನಾಟಿ ಕೃಷಿಗೆ ಪೂರಕ ಸಿದ್ಧತೆ ನಡೆದಿದೆ ಎಂದು ಇಲಾಖೆಯಿಂದ ಮಾಹಿತಿ ದೊರಕಿದೆ.

ಇನ್ನು ಸೋಮವಾರಪೇಟೆ ತಾಲೂಕಿನಲ್ಲಿ ಮುಂಗಾರು ಮಳೆ ಆಶ್ರಿತ 7600 ಹೆಕ್ಟೇರ್‍ನಲ್ಲಿ ಭತ್ತ ಬೆಳೆಯಲು ಕೃಷಿಕ ಮುಂದಾಗಿದ್ದು, ಹಾರಂಗಿ ಜಲಾಶಯ ಹಾಗೂ ಚಿಕ್ಲಿಹೊಳೆ ಜಲಾಶಯದಿಂದ ನಾಲೆಗಳ ಮೂಲಕ ನೀರು ಪೂರೈಕೆಯೊಂದಿಗೆ ಕ್ರಮವಾಗಿ 2000 ಹೆಕ್ಟೇರ್, 400 ಹೆಕ್ಟೇರ್ ಒಳಗೊಂಡು ಈ ತಾಲೂಕಿನಲ್ಲಿಯೂ ಇತರ ಬೆಳೆಗಳ ಸಹಿತ ಒಟ್ಟು 14 ಸಾವಿರ ಹೆಕ್ಟೇರ್ ಕೃಷಿ ಕಾಯಕದಲ್ಲಿ ರೈತ ತೊಡಗಿದ್ದಾನೆ.

ರೈತರಿಗೆ ಮಾಹಿತಿ: ಈಗಾಗಲೇ ಬಿತ್ತನೆಯಲ್ಲಿ ತೊಡಗಿರುವ ರೈತರು ರೈತ ಸಂಪರ್ಕ ಕೇಂದ್ರಗಳಿಂದ ಸಹಾಯಧನದಲ್ಲಿ ಹಸಿರೆಲೆ ಗೊಬ್ಬರ ಬೀಜ, ಭತ್ತ ಹಾಗೂ ಜೋಳದ ಬೀಜಗಳನ್ನು ಗುಣಮಟ್ಟದಲ್ಲಿ ಹೊಂದಿಕೊಳ್ಳಲು ಸಲಹೆ ನೀಡಿರುವ ಕೃಷಿ ಅಧಿಕಾರಿಗಳು, ಅಗತ್ಯವಾಗಿ ಬೀಜೋಪಚಾರ ತಿಳುವಳಿಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಭವಿಷ್ಯದಲ್ಲಿ ಪೈರು ಅಥವಾ ಬೆಳೆಗೆ ಬೆಂಕಿರೋಗದಂತಹ ಭಾದೆ ಸೋಂಕದಂತೆ ರೋಗನಾಶಕ ಪುಡಿ ನೀಡಲಾಗುತ್ತಿದ್ದು, ಈ ಪುಡಿಯನ್ನು ಬೀಜದಲ್ಲಿ ಮಿಶ್ರಣ ಮಾಡಿ ಅಗಡಿಗಳಿಗೆ ಬಿತ್ತಿದರೆ ಉತ್ತಮ ಸಸಿಮಡಿಯೊಂದಿಗೆ ಒಳ್ಳೆಯ ಬೆಳೆಯನ್ನು ರೈತ ಪಡೆಯಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಸಂಬಂಧಿಸಿದ ತಜ್ಞ ಅಧಿಕಾರಿಗಳು ಗಮನ ಸೆಳೆದಿದ್ದಾರೆ.

ಸೋಮವಾರಪೇಟೆ ವರದಿ : ಪ್ರಸಕ್ತ ವರ್ಷದ ಮಳೆ ಜೂನ್ ಎರಡನೇ ವಾರದಿಂದ ಪ್ರಾರಂಭಗೊಂಡಿದ್ದು, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮುಂಗಾರು ಬಿರುಸುಗೊಂಡಿದೆ. ಕಳೆದೆರಡು ದಿನಗಳಿಂದ ಸಾಧಾರಣವಾಗಿ ನಿರಂತರ ಮಳೆ ಸುರಿಯುತ್ತಿದ್ದು, ಕೃಷಿ ಕಾರ್ಯ ಚುರುಕುಗೊಳ್ಳುತ್ತಿದೆ.

ರೈತರು ಗದ್ದೆಗಳತ್ತ ಚಿತ್ತ ಹರಿಸಿದ್ದು, ಗದ್ದೆಗಳಲ್ಲಿ ಸಸಿಮಡಿ ತಯಾರಿ ಕಾರ್ಯ ಪ್ರಾರಂಭಗೊಂಡಿದೆ. ಉತ್ತಮ ಮಳೆಯಿಂದಾಗಿ ಗದ್ದೆಗಳಲ್ಲಿ ನೀರಿನ ಸಂಗ್ರಹವಾಗುತ್ತಿದ್ದು, ಬತ್ತಿಹೋಗಿದ್ದ ಸಣ್ಣಪುಟ್ಟ ತೊರೆಗಳಿಗೆ ಜೀವಬರುತ್ತಿದೆ.

ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿದೆ. ತಾಲೂಕಿನ ಶಾಂತಳ್ಳಿ, ಬೆಟ್ಟದಳ್ಳಿ, ತಲ್ತರೆಶೆಟ್ಟಳ್ಳಿ, ಕೂತಿ, ಕುಡಿಗಾಣ, ಹೆಗ್ಗಡಮನೆ, ಪುಷ್ಪಗಿರಿ, ತೋಳೂರುಶೆಟ್ಟಳ್ಳಿ, ಹರಪಳ್ಳಿ, ಬೀದಳ್ಳಿ, ಬೆಂಕ್ಯಳ್ಳಿ, ಯಡೂರು, ಹಾನಗಲ್ಲು, ಬೇಳೂರು, ಗೌಡಳ್ಳಿ, ನಂದಿಗುಂದ, ಶನಿವಾರಸಂತೆ, ಕೊಡ್ಲಿಪೇಟೆ ಭಾಗಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತಿದ್ದು, ಕೆಲವೆಡೆ ಗದ್ದೆಗಳಲ್ಲಿ ಸಸಿಮಡಿ ತಯಾರಿಗೆ ಕೆಲಸ ಪ್ರಾರಂಭಗೊಂಡಿದೆ.

ಗದ್ದೆಗಳನ್ನು ಉತ್ತು ಹದಗೊಳಿಸಿ ಬಿತ್ತನೆ ಬೀಜವನ್ನು ಹಾಕಲಾಗಿದೆ. ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯವೂ ಪ್ರಗತಿಯಲ್ಲಿದ್ದು, ರೈತರು ಆಯಾ ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.

ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಖರೀದಿಸುವಂತೆ ಸಲಹೆ ನೀಡಿರುವ ರಾಜಶೇಖರ್, ಭತ್ತ ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಯಾವದೇ ಸಮಸ್ಯೆಗಳಿದ್ದರೂ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. ರೈತರು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಬಳಸಿ ಭತ್ತಕೃಷಿಯಲ್ಲಿ ನಷ್ಟಕ್ಕೊಳಗಾಗಬಾರದು ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಪ್ರಸಕ್ತ ವರ್ಷದ ಮುಂಗಾರು ಆಶಾದಾಯಕವಾಗಿ ಪ್ರಾರಂಭವಾಗಿದ್ದು, ಕೃಷಿ ಕಾರ್ಯಕೈಗೊಳ್ಳಲು ಸೂಕ್ತ ವಾತಾವರಣವನ್ನು ನಿರ್ಮಿಸಿಕೊಟ್ಟಿದೆ. ಕೃಷಿ ಸಮಸ್ಯೆಗಳನ್ನು ಬಗೆಹರಿಸುವದರೊಂದಿಗೆ ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ವಿತರಿಸಲು ಕೃಷಿ ಇಲಾಖೆಯೂ ಸನ್ನದ್ಧವಾಗಿದೆ. ಸದ್ಯ ರೈತಾಪಿ ವರ್ಗದ ಚಿತ್ತ ಗದ್ದೆ-ಹೊಲಗಳತ್ತ ನೆಟ್ಟಿದ್ದು, ಅನ್ನದಾತರು ಕೃಷಿಯತ್ತ ಮುಖಮಾಡುತ್ತಿದ್ದಾರೆ.

-ಶ್ರೀಸುತ, ವಿಜಯ್ ಹಾನಗಲ್