ಮಡಿಕೇರಿ, ಜೂ. 11: ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೊಳಪಡುವ ಮೆಟ್ರಿಕ್ ಪೂರ್ವ ಬಾಲಕರು ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಂದ ಹಾಗೂ ಪರಿಶಿಷ್ಟ ಜಾತಿಯ ಮೆಟ್ರಿಕ್ ನಂತರದ ಬಾಲಕಿ-ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ನಿಲಯ ಪ್ರವೇಶಾತಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ನೋಂದಾಯಿಸಲು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಆನ್‍ಲೈನ್ ಅರ್ಜಿ ಸೌಲಭ್ಯವನ್ನು ಒದಗಿಸಿರುವದರಿಂದ ಬೇರಾವದೇ ಸ್ವರೂಪದ ಅರ್ಜಿಯನ್ನು ಇಲಾಖೆಯು ಪರಿಗಣಿಸುವದಿಲ್ಲ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯಗಳ ವಿವರ: ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮಡಿಕೇರಿ (5 ರಿಂದ 10ನೇ ತರಗತಿ), ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ (5 ರಿಂದ 10ನೇ ತರಗತಿ), ಮೆಟ್ರಿಕ್ ಪೂರ್ವ ಬಾಲಕರ ನಿಲಯ ಚೇರಂಬಾಣೆ (5 ರಿಂದ 10ನೇ ತರಗತಿ), ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮಡಿಕೇರಿ (ಮೆಟ್ರಿಕ್ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು. ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ (ಮೆಟ್ರಿಕ್ ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ). ಆಸಕ್ತ ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವಾಗ ಭಾವಚಿತ್ರ, ಜಾತಿ ದೃಢೀಕರಣ ಪತ್ರ, ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಹಿಂದಿನ ವರ್ಷದ ಅಂಕಪಟ್ಟಿ ಅಪ್‍ಲೋಡ್ ಮಾಡತಕ್ಕದ್ದು. ಮೊಬೈಲ್ ನಂಬರ್‍ನ್ನು ಹೊಂದಿರುವದು ಕಡ್ಡಾಯವಾಗಿರುತ್ತದೆ ಹಾಗೂ ವಾಸಸ್ಥಳ ದೃಢೀಕರಣ ಪತ್ರವನ್ನು ಪಡೆದಿಟ್ಟುಕೊಂಡಿರತಕ್ಕದ್ದು.

ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯ ಮಿತಿ ರೂ. 2.50 ಲಕ್ಷ ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಕುಟುಂಬ ವಾರ್ಷಿಕ ಆದಾಯ ಮಿತಿ ರೂ. 6 ಲಕ್ಷ ಆಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-223552 ನ್ನು ಸಂಪರ್ಕಿಸಬಹುದು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ

ಹಿಂದುಳಿದ ವರ್ಗಗಳ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ರೂ. 1 ಲಕ್ಷ ಹಾಗೂ ಪ್ರವರ್ಗ 2ಎ, 3ಎ, 3ಬಿ ಮತ್ತು ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರೂ. 44,500 ಕ್ಕಿಂತ ಕಡಿಮೆ ಆದಾಯ ಹೊಂದಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು 2017-18ನೇ ಸಾಲಿನಲ್ಲಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ 08276-282048 ಸೋಮವಾರಪೇಟೆ ತಾಲೂಕು, 08272-298034 ಮಡಿಕೇರಿ ತಾಲೂಕು ಹಾಗೂ 08274-249211 ವೀರಾಜಪೇಟೆ ತಾಲೂಕು ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡು ಹತ್ತಿರ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿ ದೂ.ಸಂ: 08272-225628 ನ್ನು ಸಂಪರ್ಕಿಸಬಹುದು.

ಗೃಹರಕ್ಷಕ ದಳಕ್ಕೆ

ಜಿಲ್ಲೆಯ ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ಸೇನೆಯಲ್ಲಿ 5 ವರ್ಷ ಸೇವೆ ಸಲ್ಲಿಸಿರುವವರು, ಪ್ಯಾರಾ ಮಿಲಿಟರಿ 5 ವರ್ಷ, ಪೊಲೀಸ್ ಸೇವೆಯಲ್ಲಿ 5 ವರ್ಷ, ಎನ್.ಸಿ.ಸಿ. ‘ಸಿ’ ಸರ್ಟಿಫಿಕೇಟ್ ಹೊಂದಿರುವವರು ಅರ್ಹರಾಗಿರುತ್ತಾರೆ.

ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ವಿಳಾಸ ದೂರವಾಣಿ ಸಂಖ್ಯೆ ಮತ್ತಿತರ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ಜಿಲ್ಲಾಧಿಕಾರಿ ಅವರ ಕಚೇರಿಗೆ ತಾ. 30 ರೊಳಗೆ ಸಲ್ಲಿಸಬೇಕು.

ಸಹಾಯ ಧನಕ್ಕೆ

2017-18ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಮತ್ತು ಬೌದ್ಧ ಜನಾಂಗದ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರೂ. 20 ಲಕ್ಷದವರೆಗಿನ ಸಹಾಯ ಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಇಲಾಖಾ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ನೇರವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಇಲ್ಲಿಗೆ ಸಹಾಯ ಧನ ಕೋರಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ. ಮಾಹಿತಿಗಾಗಿ ದೂ.ಸಂ: 08272-225628 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್ ತಿಳಿಸಿದ್ದಾರೆ.

ಸಾವಯವ ಕೃಷಿ ತರಬೇತಿಗೆ

ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಾಗಲಕೋಟೆ ಇವರ ವತಿಯಿಂದ ಸಾವಯವ ಕೃಷಿ ಬಗ್ಗೆ ಮೂರು ದಿನಗಳ ಉಚಿತ ತರಬೇತಿ ಶಿಬಿರವನ್ನು ಜೂನ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಸಾವಯವ ಕೃಷಿಯ ಮಹತ್ವ, ಅವಶ್ಯಕತೆ, ಇತಿಹಾಸ, ಆಹಾರ ಮತ್ತು ತರಕಾರಿ ಬೆಳೆಗಳಲ್ಲಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಕೃಷಿ ಪದ್ಧತಿ, ಸಾವಯವ ಪದ್ಧತಿಯಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ, ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ವ್ಯವಸ್ಥೆ, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವದು. ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ತಾ. 15 ರೊಳಗೆ ನೋಂದಾಯಿಸಬೇಕು.

ಹೆಚ್ಚಿನ ಮಾಹಿತಿಗೆ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ. ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103, ಮೊಬೈಲ್ 9482630790 ನ್ನು ಸಂಪರ್ಕಿಸಬಹುದು ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.