ಶನಿವಾರಸಂತೆ, ಜೂ. 11: ಸರಕಾರಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರೂ ಸರಕಾರಿ ಶಾಲೆಗಳಲ್ಲಿ ಪ್ರಸ್ತುತ ಮಕ್ಕಳ ದಾಖಲಾತಿ ತೀರ ಕಡಿಮೆಯಾಗಿದೆ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಅಭಿಪ್ರಾಯ ಪಟ್ಟರು. ಜಿಲ್ಲಾ ಪಂಚಾಯಿತಿ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಆಂಗ್ಲ ಭಾಷಾ ವ್ಯಾಮೋಹವೇ ಕಾರಣ. ವಸತಿ ಶಾಲೆಗಳನ್ನು ತೆರೆದರೆ ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಬಹುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಮಾತನಾಡಿ, ಸರಕಾರದ ಆದೇಶದ ಅನ್ವಯ ಸರ್ಕಸ್ ಮಾಡಿಯಾದರೂ ಮಕ್ಕಳನ್ನು ಶಾಲೆಗೆ ಕರೆತರಬೇಕು. ಎಲ್ಲೆಡೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಿದೆ. ಶಾಲೆ ಬಿಟ್ಟ ಮಕ್ಕಳನ್ನು ಶಿಕ್ಷಕರು ಪೋಷಕರ ಮನವೊಲಿಸಿ ಕರೆತರುವ ಪ್ರಯತ್ನ ಮಾಡಬೇಕು ಎಂದರು. ಸಭೆಯ ನಂತರ ನಡೆದ ಜಾಥಾದಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಲೆಕ್ಕಾಧಿಕಾರಿ ದೇವರಾಜ್, ಸದಸ್ಯೆ ಎನ್.ಕೆ. ಸುಮತಿ, ಮಾದ್ರೆ ಗ್ರಾಮದ ಸರಕಾರಿ ಶಾಲಾ ಮುಖ್ಯ ಶಿಕ್ಷಕ ಪುಟ್ಟರಾಜ್, ದುಂಡಳ್ಳಿ ಶಾಲೆ ಮುಖ್ಯ ಶಿಕ್ಷಕಿ ಉಷಾ, ದೊಡ್ಡಬಿಳಾಹ ಶಾಲೆಯ ಮುಖ್ಯಶಿಕ್ಷಕ ಕಾಂತರಾಜ್, ಚಿಕ್ಕಕೊಳತ್ತೂರು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ದೊಡ್ಡಕೊಳತ್ತೂರು ಶಾಲೆಯ ಮುಖ್ಯ ಶಿಕ್ಷಕ ಮಹದೇವ್, ತ್ಯಾಗರಾಜ ಕಾಲೋನಿ ಶಾಲೆಯ ಮುಖ್ಯ ಶಿಕ್ಷಕಿ ಲತಾಮಣಿ ಉಪಸ್ಥಿತರಿದ್ದರು.