ಮಡಿಕೇರಿ, ಜೂ. 11: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಬಳಿಯ ಬೃಹತ್ ಸಾಂಗ್ರಿ ಪರ್ವತ ಶಿಖರವೇರಿ ಹೊಸ ದಾಖಲೆಯನ್ನು ಕೊಡಗಿನ ಆದಿವಾಸಿ ಮಕ್ಕಳು ನಿರ್ಮಿಸಿದ್ದಾರೆ.

ಜಿ.ಪಂ. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ಆಯ್ದ ಆದಿವಾಸಿ 30 ಯುವಜನರನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನ ಹಿಮಾಲಯನ್ ಮೌಂಟೇನಿಯನ್ ಸಂಸ್ಥೆಗೆ ವಿವಿಧ ತರಬೇತಿಗಾಗಿ ಕಳುಹಿಸಿಕೊಡಲಾಗಿತ್ತು. ಜಿಲ್ಲೆಯ ವಿವಿಧ ಹಾಡಿಗಳ ಆಯ್ದ ಆದಿವಾಸಿ ಮಕ್ಕಳು 17 ಸಾವಿರ ಅಡಿ ಎತ್ತರ ಪ್ರದೇಶವಾದ ಸಾಂಗ್ರಿ ಶಿಖರವನ್ನೇರಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಡಾರ್ಜಿಲಿಂಗ್‍ಗೆ ತೆರಳಲಿದ್ದ 30 ಯುವಜನರಲ್ಲಿ 26 ಹುಡುಗರು, 4 ಹುಡುಗಿಯರು ಸೇರಿದಂತೆ ಒಂದು ತಿಂಗಳ ಡಾರ್ಜಿಲಿಂಗ್ ಪ್ರವಾಸದಲ್ಲಿ 20 ದಿನಗಳ ಕಾಲ ಪ್ರತಿನಿತ್ಯ 10 ಕಿ.ಮೀ. ಹೆಚ್ಚು ಓಟ ಓಡುವದು, ಯೋಗ, ವ್ಯಾಯಾಮ ತರಬೇತಿ ಹೀಗೆ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಎವರೆಸ್ಟ್ ಶಿಖರವೇರಲು ಪ್ರಯತ್ನಿಸಿದ್ದಾರೆ ಎಂದು ಜಿ.ಪಂ. ಸಿಇಓ ಚಾರುಲತಾ ಸೋಮಲ್ ತಿಳಿಸಿದ್ದಾರೆ.

ಆದಿವಾಸಿ ಮಕ್ಕಳು ಎವರೆಸ್ಟ್ ಶಿಖರ ಏರಿ ವಿಶ್ವದಲ್ಲಿ ದಾಖಲೆ ಮಾಡಬೇಕು ಎಂಬದು ಬಯಕೆಯಾಗಿದ್ದು, ಆ ನಿಟ್ಟಿನಲ್ಲಿ ಡಾರ್ಜಿಲಿಂಗ್ ಪ್ರವಾಸಕ್ಕೆ ಅವಕಾಶ ಮಾಡಲಾಗಿತ್ತು. ಬೇಸಿಕ್ ಕೋರ್ಸ್‍ನ ನಂತರ ಅಡ್ವಾನ್ಸ್ ತರಬೇತಿ ಪಡೆದು ಹಿಮಾಲಯ ಪರ್ವತ ಏರಬೇಕೆಂಬದು ಆಶಯವಾಗಿದೆ. ಆ ನಿಟ್ಟಿನಲ್ಲಿ ಆದಿವಾಸಿ ಮಕ್ಕಳಿಗೆ ತರಬೇತಿ ನೀಡಲಾಗುವದು. ಮಾರ್ಗದರ್ಶಕರಾದ ವಿರೂಪಾಕ್ಷ ರೈ ಹಾಗೂ ಬರಮಪ್ಪ ಪಸಗಾರ್ ಅವರ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಳ್ಳಲಾಗಿತ್ತು, ಆದಿವಾಸಿ ಮಕ್ಕಳು ಡಾರ್ಜಿಲಿಂಗ್‍ನಿಂದ ನೇರವಾಗಿ ನಗರಕ್ಕೆ ಆಗಮಿಸಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅನುಭವ ಹಂಚಿಕೊಂಡರು. ಜಿಲ್ಲೆಯ ಆದಿವಾಸಿ ಯುವಜನರಾದ ಸುನಿತಾ ಹಾಗೂ ಇತರರು ಪರ್ವತಾರೋಹಣದ ಅನುಭವ ಹಂಚಿಕೊಂಡರು. ಈ ಸಂದರ್ಭ ಐಟಿಡಿಪಿ ಇಲಾಖಾ ಅಧಿಕಾರಿ ಪ್ರಕಾಶ್ ಮತ್ತು ಇತರರು ಇದ್ದರು.