ಮಡಿಕೇರಿ, ಜೂ. 11: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಿರುವದಕ್ಕೆ ಜಿಲ್ಲೆಯ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಸಂಪಾಜೆಯ ಪಯಸ್ವಿನಿ ಸಹಕಾರ ಸದನದಲ್ಲಿ ಏರ್ಪಡಿಸಲಾಗಿದ್ದ ಸಂಪಾಜೆ ಗ್ರಾ.ಪಂ. ಜನತೆಗೆ ಅಭಿನಂದನೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಬಳಿಕ ಅವರು ಮಾತನಾಡಿದರು.

ಜಿಲ್ಲೆಯ ಬ್ರಹ್ಮಗಿರಿ, ಪುಷ್ಪಗಿರಿ, ನಾಗರಹೊಳೆ, ತಲಕಾವೇರಿ ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಿದ್ದರೂ ಸಹ ಗಾಬರಿಯಾಗುವ ಅಗತ್ಯವಿಲ್ಲ. ಭಾರತ ಸರ್ಕಾರ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಆದೇಶ ಹೊರಡಿಸಿದ್ದರೂ ಸಹ, ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಶಾಸಕರನ್ನು ಒಳಗೊಂಡ ಸಮಿತಿ ಇದ್ದು, ಈ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಕಾಶವಿದೆ. ಆದ್ದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದು ಶಾಸಕರು ನುಡಿದರು.

ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಬಾರದು ಎಂದು ಬಹಳ ವರ್ಷಗಳಿಂದಲೂ ವಿರೋಧಿಸಿ ಕೊಂಡು ಬರಲಾಗಿತ್ತು, ಪ್ರಸ್ತುತ ಸಂದರ್ಭದಲ್ಲಿಯೂ ಅಮೇರಿಕಾದ ಅಧ್ಯಕ್ಷರೂ ಯುನೆಸೆಫ್‍ಗೆ ತಮ್ಮ ದೇಶದ ಕೆಲವು ಪ್ರದೇಶ ಹಾಗೂ ಕಟ್ಟಡಗಳನ್ನು ಸೇರಿಸಲು ಬಾರಿ ಪ್ರತಿರೋಧ ವ್ಯಕ್ತಪಡಿಸುವದನ್ನು ಕಾಣುತ್ತಿದ್ದೇವೆ.

ಕೊಡಗಿನ ಜನರು ದೇವರಕಾಡು ಹಾಗೂ ಅರಣ್ಯವನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಅನಾದಿ ಕಾಲದಿಂದಲೂ ಗಿಡ-ಮರ, ಮಳೆ ನಡುವೆ ಬದುಕು ಕಟ್ಟಿಕೊಂಡು ಬಂದಿರುವ ಜನರ ಜೀವನವೂ ಮುಖ್ಯ. ಪರಿಸರ ಸಂರಕ್ಷಣೆ ಮಾಡುವಲ್ಲಿ ಕೊಡಗಿನ ಜನರಿಗೆ ಬೇರೆಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕೆ.ಜಿ. ಬೋಪಯ್ಯ ನುಡಿದರು.