ಸೋಮವಾರಪೇಟೆ, ಜೂ.12: ಕಳೆದ 2012ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರೂ.1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆಗಳು ಇಂದಿಗೂ ಮುಂದುವರೆದಿದ್ದು, ಮಾರುಕಟ್ಟೆಗೆ ಅಳವಡಿಸಿರುವ ಛಾವಣಿ ಮಳೆಗೆ ಸೋರುತ್ತಿದೆ.ಯೋಜನೆ ಪೂರ್ಣಗೊಂಡ ವರ್ಷದಲ್ಲೇ ಛಾವಣಿ ಸೋರಲಾರಂಭಿಸಿದ್ದು ಇದನ್ನು ದುರಸ್ತಿಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸಿದರೂ ಇಂದಿಗೂ ಪೂರ್ಣಗೊಂಡಿಲ್ಲ. ಹೈಟೆಕ್ ಮಾರುಕಟ್ಟೆ ನಿರ್ಮಾಣಗೊಂಡು ಐದು ವರ್ಷವಾದರೂ ಸೋರುವಿಕೆ ಮಾತ್ರ ನಿಂತಿಲ್ಲ.

ಪರಿಣಾಮ ವರ್ತಕರು ಟಾರ್ಪಲ್, ಪ್ಲಾಸ್ಟಿಕ್ ಕಟ್ಟಿಕೊಂಡು ವ್ಯಾಪಾರ ಮಾಡಬೇಕಿದ್ದು, ಟಾರ್ಪಲ್‍ನಿಂದ ಇಳಿಯುವ ನೀರನ್ನು ಸಂಗ್ರಹಿಸಲು ಬಕೆಟ್‍ಗಳನ್ನು ಇಡಲಾಗಿದೆ. ಮಾರುಕಟ್ಟೆ ಛಾವಣಿಯ ಶೇ. 60ರಷ್ಟು ಭಾಗ ಸೋರುತ್ತಿದ್ದು, ಗ್ರಾಹಕರೂ ಸಹ ಮಳೆಯ ನೀರಿನಲ್ಲಿ ತೊಯ್ದುಕೊಂಡೇ ದಿನಸಿ, ತರಕಾರಿ ಖರೀದಿಸಬೇಕಿದೆ.

ಇದರೊಂದಿಗೆ ಮಾರುಕಟ್ಟೆಗೆ ತೆರಳುವ ಮಾರ್ಗದಲ್ಲೂ ಕೆಸರಿನ ಕೊಂಪೆ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಸೋರುವ ಛಾವಣಿ, ಕೆಸರಿನ ಕೊಂಪೆಯ ನಡುವೆ ಕೋಟಿ ವೆಚ್ಚದ ಕಾಮಗಾರಿಯೊಂದು ಪಟ್ಟಣ ಪಂಚಾಯಿತಿಯನ್ನು ಅಣಕಿಸುತ್ತಿದೆ.