ಸಿದ್ದಾಪುರ, ಜೂ. 13: ಗ್ರಾಮದ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಅಧ್ಯಕ್ಷರು ಹಾಗೂ ಪಿ.ಡಿ.ಓ. ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸಿದ್ದಾಪುರ ಗ್ರಾ.ಪಂ. ಗ್ರಾಮಸಭೆ ನೋಡಲ್ ಅಧಿಕಾರಿ ಹಾಗೂ ಪಶುವೈದ್ಯಾಧಿಕಾರಿ ಎ.ಬಿ ತಮ್ಮಯ್ಯ ಅವರ ಸಮ್ಮುಖದಲ್ಲಿ ಗ್ರಾ.ಪಂ. ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಗ್ರಾ.ಪಂ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಯಿತು. ಗ್ರಾಮಸ್ಥರಾದ ಹೆಚ್.ಬಿ. ರಮೇಶ ಮಾತನಾಡಿ, ಗ್ರಾ.ಪಂ. ಮಾಂಸ ಮಾರಾಟಕ್ಕಾಗಿ ಎಂ.ಜಿ. ರಸ್ತೆಯಲ್ಲಿ ರೂ. 12 ಲಕ್ಷ ವೆಚ್ಚದಲ್ಲಿ ನೂತನ ಮಳಿಗೆಯನ್ನು ನಿರ್ಮಿಸಿದ್ದು, ಇದೀಗ ಪಾಳು ಬಿದ್ದಿದೆ. ಅಧ್ಯಕ್ಷರು ಹಾಗೂ ಪಿ.ಡಿ.ಓ. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಕಾಮಗಾರಿಯ ಗುತ್ತಿಗೆಯನ್ನು ತುಂಡು ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ. ರೂ. 1 ಲಕ್ಷಕ್ಕೂ ಅಧಿಕ ಹಣದ ಕಾಮಗಾರಿಯನ್ನು ಟೆಂಡರ್ ನೀಡಬೇಕೆಂಬ ನಿಯಮವಿದ್ದರೂ, ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು. ಮಾಂಸ ಮಾರಾಟಗಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ನೂತನ ಮಳಿಗೆಗೆ ಮಾಂಸ ಮಾರಾಟ ಸ್ಥಳಾಂತರಿಸುವಲ್ಲಿ ಗ್ರಾ.ಪಂ. ಎಡವಿದ್ದು, ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಳಿಗೆ ಪಾಳುಬಿದ್ದಿದ್ದು, ಸರಕಾರದ ಹಣ ದುರುಪಯೋU Àವಾಗಿದೆ. ಪ್ರತಿಯೊಂದು ವಿಚಾರದಲ್ಲೂ ಕಾನೂನು ಮಾತನಾಡುವ ಪಿ.ಡಿ.ಓ. ಅವರಿಗೆ ಮಾಂಸ ಮಾರಾಟದ ಸಂದರ್ಭ ಕಾನೂನಿನ ಅರಿವು ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಗ್ರಾಮಸ್ಥರಾದ ಎ.ಎಸ್. ಮುಸ್ತಫಾ ಮಾತನಾಡಿ, ಕಸ ವಿಲೇವಾರಿಗಾಗಿ ಸಾಕಷ್ಟು ಹೋರಾಟಗಳು ನಡೆದಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳದ ಪಂಚಾಯಿತಿ ಆಡಳಿತ ಮಂಡಳಿ ಕುರಿ ಹಾಗೂ ಕೋಳಿ ಮಾಂಸ ಹರಾಜು ಪ್ರಕ್ರಿಯೆಯ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು. ಮಾಂಸ ಮಾರಾಟದ ಹರಾಜು ಪ್ರಕ್ರಿಯೆಯ ಜಾಹೀರಾತನ್ನು ಪ್ರತಿ ವರ್ಷ ಒಂದೇ ದಿನಪತ್ರಿಕೆಗೆ ನೀಡುತ್ತಿದ್ದು, ಈ ವರ್ಷ ನೂತನ ದಿನಪತ್ರಿಕೆಗಳಿಗೆ ನೀಡಿದ್ದು, ದುಬಾರಿ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕರಡಿಗೋಡುವಿನ ಶಾಲೆಯ ಮುಖ್ಯ ಶಿಕ್ಷಕಿ ಮೋಳಿ ಮಾತನಾಡಿ, ಕರಡಿಗೋಡು ಶಾಲೆಗೆ ಅರಣ್ಯ ವ್ಯಾಪ್ತಿಯ ಅವರೆಗುಂದದಿಂದ ಹೆಚ್ಚಿನ ಮಕ್ಕಳು ವ್ಯಾಸಂಗಕ್ಕೆ ಬರುತ್ತಿದ್ದು, ಮಕ್ಕಳಿಗೆ ಗ್ರಾ.ಪಂ ಮೂಲಕ ಸಾರಿಗೆ ವೆಚ್ಚವನ್ನು ಈ ಹಿಂದೆ ನೀಡಲಾಗುತ್ತಿತ್ತು. ಆದರೆ ಕಳೆದ 8 ತಿಂಗಳಿಂದ ವಾಹನ ಭತ್ಯೆಯನ್ನು ನೀಡದ ಕಾರಣ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡರು. ಈ ಸಂದರ್ಭ ಗ್ರಾ.ಪಂ. ವಿರುದ್ಧ ಗ್ರಾಮಸ್ಥರು ಅಸಮಾದಾನ ವ್ಯಕ್ತಪಡಿಸಿ, ಶಾಲಾ ಮಕ್ಕಳ ಪ್ರಯಾಣ ಭತ್ಯೆಯನ್ನು ಪಂಚಾಯಿತಿ ಭರಿಸುವಂತೆ ಒತ್ತಾಯಿಸಿ ದರು. ಇದಕ್ಕೆ ಪೂರಕವಾಗಿ ಮಾತ ನಾಡಿದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ, ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಕಾಡಾನೆ ಹಾವಳಿ ಹೆಚ್ಚಿರುವ ಕರಡಿಗೋಡು ಹಾಗೂ ಗುಹ್ಯ ಶಾಲೆಗÀಳಿಗೆ ಮಕ್ಕಳ ಸಾರಿಗೆಗಾಗಿ ರೂ. 7500 ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡುವ ಬಗ್ಗೆ ಮೇಲ ಧಿಕಾರಿಗಳ ಗಮನಕ್ಕೆ ತರುವದಾಗಿ ತಿಳಿಸಿದರು.

ಗ್ರಾಮಸ್ಥರಾದ ಪಿ.ಕೆ. ಚಂದ್ರನ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಮಕ್ಕಳಿಗೆ ಊಟದ ನಂತರ ಕೈತೊಳೆಯಲು ಕೂಡ ನೀರಿಲ್ಲದ ಸಮಸ್ಯೆ ಎದುರಾಗಿದೆ. ಶಾಲೆಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಚೆಸ್ಕಾಂ ಇಲಾಖೆ ವತಿಯಿಂದ ಕಂಬವನ್ನು ಹಾಕಲು ತೆಗೆದಿದ್ದ ಗುಂಡಿಗೆ ಬಿದ್ದು ವ್ಯಕಿಯೋರ್ವ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಈವರೆಗೂ ಪರಿಹಾರ ನೀಡದಿರುವ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಸುಬ್ರಮಣಿ ಮಾತನಾಡಿ, ಎಂ.ಜಿ. ರಸ್ತೆಯಲ್ಲಿ ಸಂತೆ ದಿನ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ರಸ್ತೆಯ ಒಂದು ಬದಿಯಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದರು.

ಕರಡಿಗೋಡು ನಿವಾಸಿ ಬೈಜು, ಕೂಡುಗದ್ದೆ ನಿವಾಸಿ ಸಿ.ಯು. ಮುಸ್ತಫಾ, ಅವರೆಗುಂದ ನಿವಾಸಿ ಎಂ.ಸಿ. ವಾಸು ಮಾತನಾಡಿ, ಪಂಚಾಯಿತಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.