ಗೋಣಿಕೊಪ್ಪಲು, ಜೂ.13: ರಾಜ್ಯದ ವಿವಿಧ ಜಿಲ್ಲೆಗಳೂ ಒಳಗೊಂಡಂತೆ ಕೊಡಗು ಜಿಲ್ಲೆಯಲ್ಲಿಯೂ ಕೃಷಿಗೆ ಯೋಗ್ಯವಲ್ಲದ ಖರಾಬು (ಸಿ ಮತ್ತು ಡಿ) ಜಮೀನನ್ನು 1990ಕ್ಕೂ ಮುನ್ನ ಕಂದಾಯ ಇಲಾಖೆಯಿಂದ ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿತ್ತು. ಇದರಿಂದಾಗಿ ಅಂತಹ ಜಮೀನುಗಳಲ್ಲಿ ಒತ್ತುವರಿ ಮಾಡಿಕೊಂಡಿರುವವರು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಹಕ್ಕುಪತ್ರ ದೊರೆಯದೆ ಅತಂತ್ರ ಸ್ಥಿತಿಯನ್ನು ಇಂದಿನವರೆಗೂ ಎದುರಿಸುತ್ತಾ ಬಂದಿದ್ದರು. ಅಂತಹ ಜಮೀನುಗಳಲ್ಲಿ 14/04/1990ಕ್ಕೂ ಪೂರ್ವದಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ವಿಸ್ತೀರ್ಣದ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ಅದರಡಿ ರಚಿಸಲಾದ ನಿಯಮಗಳಡಿ ಸಕ್ರಮಗೊಳಿಸುವ ಕುರಿತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೆÇನ್ನಪ್ಪ ಅವರ ಮನವಿಗೂ ಸ್ಪಂದಿಸಿ ಮತ್ತೆ ‘ಬಗರ್ ಹುಕುಂ’ ಕಾಯ್ದೆಗೆ ಮರುಜೀವ ತರಲಾಗಿದೆ. ಈ ನಿಟ್ಟಿನಲ್ಲಿ ಇಂದು ಬೆಂಗಳೂರು ವಿಧಾನ ಸೌಧದ ಕಂದಾಯ ಸಚಿವರ ಕೊಠಡಿಯಲ್ಲಿ ಪದ್ಮಿನಿ ಪೆÇನ್ನಪ್ಪ ಹಾಗೂ ಅವರ ಬೆಂಬಲಿಗರು ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಸಚಿವರ ಅನಿಸಿಕೆ

‘ಶಕ್ತಿ’ಯೊಂದಿಗೆ ಕಾಗೋಡು ತಿಮ್ಮಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಅವಧಿಯಲ್ಲಿಯೇ ಅರಣ್ಯ ಇಲಾಖೆಯ ಸುಪರ್ದಿಯಿಂದ

(ಮೊದಲ ಪುಟದಿಂದ) ಕೃಷಿಗೆ ಯೋಗ್ಯವಲ್ಲದ ಸಿ ಮತ್ತು ಡಿ ಜಮೀನನ್ನು ವಾಪಾಸ್ಸು ಪಡೆಯಲಾಗಿತ್ತು. ಸರ್ಕಾರದ ಸುತ್ತೋಲೆ ತಾ.17/09/1991 ರ ಕಡೆ ಗಮನ ಸೆಳೆಯಲಾಗಿದ್ದು, ತದನಂತರ ಕಂದಾಯ ಇಲಾಖೆಯಲ್ಲಿ ಸೂಕ್ತ ತಿದ್ದುಪಡಿಗಳನ್ನು ಮಾಡಿ ಇಂಡೀಕರಣ ಮಾಡಬೇಕಾಗಿತ್ತು. ಆದರೆ, ಅರಣ್ಯ ಇಲಾಖೆಯಿಂದ ವಾಪಾಸ್ಸು ಪಡೆಯಲಾದ ಜಮೀನಿಗೆ ಇಂಡೀಕರಣ ಮಾಡಲು ಕಂದಾಯ ಇಲಾಖೆ ನಿರ್ಲಕ್ಷ್ಯ ತಾಳಿರುವದು ಇದೀಗ ಸರ್ಕಾರದ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ ತನ್ನ ಅವಧಿಯಲ್ಲಿ ಅರಣ್ಯೀಕರಣ ಮಾಡಿರುವ, ಜನವಸತಿ ಇಲ್ಲದ ಭೂಮಿಯನ್ನು ಹೊರತು ಪಡಿಸಿ ಉಳಿಕೆ ಭೂಮಿಯನ್ನು 1969 ನಿಯಮ 3ರಡಿ ತರದೆ ಸರ್ಕಾರದ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. 1990ಕ್ಕಿಂತಲೂ ಮೊದಲು ಒತ್ತುವರಿಯಾಗಿರುವ ಜಮೀನುಗಳ ವಿಸ್ತೀರ್ಣವನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ಅದರಡಿ ರಚಿಸಲಾದ ನಿಯಮಗಳನ್ವಯ ಸಕ್ರಮಗೊಳಿಸಲು ( ಅಂದರೆ ಬಾಕಿ ಇರುವ ನಮೂನೆ 50ರ ಅರ್ಜಿಗಳನ್ನು ನಿಯಮಾನುಸಾರ ವಿಲೇ ಮಾಡಲು) ಹಾಗೂ ಅರಣ್ಯ ಇಲಾಖೆಯಿಂದ ಮುಕ್ತವಾಗಿರುವ ಸಿ ಮತ್ತು ಡಿ ಜಮೀನನ್ನು ಕಂದಾಯ ಇಲಾಖೆಯಲ್ಲಿಯೇ ಇಟ್ಟುಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಸಾವಿರಾರು ಎಕರೆ ಸಿ ಮತ್ತು ಡಿ ಜಮೀನು ಇದ್ದು ಇದರಲ್ಲಿ ಅರಣ್ಯ ಇಲಾಖೆ ಡಿ ನೋಟಿಫಿಕೇಷನ್ ಮಾಡಿದ ಜಾಗವನ್ನು ಹೊರತು ಪಡಿಸಿ, ಅರಣ್ಯ ಹಾಗೂ ವನ್ಯಪ್ರಾಣಿಗಳಿಗೂ ಅಗತ್ಯ ಜಮೀನನ್ನು ಬಿಟ್ಟು ಉಳಿಕೆ ಜಮೀನನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

94ಸಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡು ವಾಸವಿರುವವರಿಗೂ ಹಕ್ಕುಪತ್ರ ಮಾಡಿಕೊಡಬಹುದಾಗಿದೆ. ಈ ಬಗ್ಗೆ ಯಾವದೇ ತಹಶೀಲ್ದಾರ್ ಅಥವಾ ಕಂದಾಯ ನಿರೀಕ್ಷಕರು ಅಡ್ಡಿ ಆತಂಕ ಒಡ್ಡಿದಲ್ಲಿ ತನಗೆ ಮಾಹಿತಿ ನೀಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಇದೇ ಸಂದರ್ಭ ಸಚಿವರು ಭರವಸೆ ನೀಡಿದರು.

ಪದ್ಮಿನಿ ಪೆÇನ್ನಪ್ಪ ಮಾತನಾಡಿ, ಈವರೆಗೆ ಅರಣ್ಯ ಇಲಾಖೆಗೆ ವಹಿಸಿದ್ದ ಭೂಮಿಯನ್ನು ಮತ್ತೆ ರೆವಿನ್ಯೂ ಇಲಾಖೆಯ ವ್ಯಾಪ್ತಿಗೆ ತರುತ್ತಿರುವದರಿಂದಾಗಿ ಬಗರ್‍ಹುಕುಂ ಕಾಯ್ದೆಗೆ ಮತ್ತೆ ಮರುಜೀವ ಬಂದಂತಾಗಿದೆ. ಅತಂತ್ರ ಸ್ಥಿತಿಯಲ್ಲಿದ್ದ ಜಿಲ್ಲೆಯ ಸಾವಿರಾರು ಜನತೆಗೆ ನ್ಯಾಯ ಸಿಕ್ಕಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭ ವಕೀಲರಾದ ಸುರೇಶ್ ಅಯ್ಯಪ್ಪ, ಬಾದುಮಂಡ ರಮೇಶ್, ಕಟ್ಟೇರ ನಂಜಪ್ಪ, ಮಾಣೀರ ಸೋಮಯ್ಯ, ಅಜ್ಜಮಾಡ ಲವ ಕುಶಾಲಪ್ಪ, ಮಾಂಗೇರ ಪೆÇನ್ನಪ್ಪ, ಮಾಣೀರ ಮನು, ಎಂ. ಅಜಿತ್, ಚಟ್ಟಂಗಡ ಅಚ್ಚಪ್ಪ, ಮಾಣೀರ ನಂಜಪ್ಪ, ಚಟ್ಟಂಗಡ ಸೋಮಣ್ಣ, ಕಳ್ಳಿಚಂಡ ಜೀವನ್ ಮುಂತಾದವರು ಉಪಸ್ಥಿತರಿದ್ದರು.

- ಟಿ.ಎಲ್. ಶ್ರೀನಿವಾಸ್