ಮಡಿಕೇರಿ, ಜೂ. 13: ನಗರದ ರಾಜಾಸೀಟ್ ಮಾರ್ಗವಾಗಿ ಮುಂದೆ ಸಾಗಿದರೆ, ಆಕಾಶವಾಣಿ ಕೆಂದ್ರ ಸೇರಿದಂತೆ ಅನೇಕ ಸರಕಾರಿ ವಸತಿ ಗೃಹಗಳು ಅಲ್ಲಲ್ಲಿ ತಲೆಯೆತ್ತುತ್ತಿರು ವದು ಗೋಚರಿಸಲಿದೆ. ಈ ಎಲ್ಲವನ್ನು ದಾಟಿ ಮುಂದೆ ಸಾಗಿದರೆ, ಈಚೆಗಷ್ಟೇ, ಸರಕಾರ ಭೂಮಿಪೂಜೆ ನಡೆಸಿರುವ ಮಿನಿ ತಾರಾಲಯದ ಬೆಟ್ಟ ಶ್ರೇಣಿ ಎದುರಾಗಲಿದೆ. ಅದೆಲ್ಲವನ್ನು ದಾಟಿ ಮುನ್ನಡೆದರೆ ಹಿಂದೊಮ್ಮೆ ದಕ್ಷಿಣ ಭಾರತದ ಪ್ರಮುಖ ರೈಲ್ವೇ ಮಾರ್ಗಗಳ ನಿಯಂತ್ರಣ ಕೆಂದ್ರವಿದ್ದ ಪಳೆಯುಳಿಕೆ ಕಣ್ಣಿಗೆ ಗೋಚರಿಸಿದರೆ ಎದುರು ಭಾಗದಲ್ಲಿ ಕುಂಡಾಮೇಸ್ತ್ರಿ ಯೋಜನೆಯ ಕುಡಿಯುವ ನೀರಿನ ಶುದ್ಧೀಕರಣ ಘಟಕ ಗಮನ ಸೆಳೆಯಲಿದೆ.

ಆ ಬೆಟ್ಟ ಶ್ರೇಣಿಯಲ್ಲಿ ನಿಂತು ನೇರ ದೃಷ್ಟಿ ಹರಿಸಿದರೆ ಎದುರಿನ ಕಾನನ ನಡುವಿನ ಶಿಖರದಲ್ಲಿ ರಾಶಿ ಕಸ ಕಣ್ಣಿಗೆ ಬೀಳಲಿದೆ. ಪ್ರಕೃತಿ ರಮಣೀಯ ಈ ತಾಣದಲ್ಲಿ ಕಾಡಿನಂಚಿನೊಳಗೆ ಕಾಣುವ ಕಸದ ರಾಶಿಯತ್ತ ಹೆಜ್ಜೆ ಇರಿಸಿದರೆ ಅರೆಕ್ಷಣ ಅಚ್ಚರಿ ಮೂಡಲಿದೆ.

ಈ ಕಸದ ಕೊಂಪೆಯತ್ತ ಹೆಜ್ಜೆ ಇಡುವ ಮಾರ್ಗದ ಪ್ರವೇಶದ್ವಾರ ದಲ್ಲಿ ಯಾವದೋ ಬಂಗಲೆಯೊಳಗೆ ಹೋಗುವ ಅನುಭವವಾಗಲಿದೆ. ಸಾಮಾನ್ಯ ಬಂಗಲೆಗಳಿಗೆ ತೆರಳುವ ರೀತಿಯ ಗೇಟುಗಳನ್ನು ಇಲ್ಲಿ ಅಳವಡಿಸಿದ್ದು ನೈಸರ್ಗಿಕ ಹೂವಿನ ಕುಂಡಗಳು ಸ್ವಾಗತಿಸಲಿವೆ. ಪಕ್ಕದಲ್ಲೇ ಒಂದು ನೂತನ ಪುಟ್ಟ ಮನೆ ಕಣ್ಣಿಗೆ ಬೀಳಲಿದ್ದು, ಅಲ್ಲಿ ದಂಪತಿಯ ಸಂಸಾರವೊಂದು ವಾಸವಿದೆ.

ಆ ಮನೆ ದಾಟಿ ಮುನ್ನಡೆದರೆ ಇಡೀ ಮಡಿಕೇರಿ ನಗರದಿಂದ ಮನೆ ಮನೆಗಳಿಂದ ನಿತ್ಯ ಸಂಗ್ರಹಿಸುವ ಕಸವನ್ನು ಹತ್ತಾರು ಟ್ರ್ಯಾಕ್ಟರ್‍ಗಳಲ್ಲಿ ತಂದು ರಾಶಿ ಹಾಕುವ ಸನ್ನಿವೇಶ ಗೋಚರಿಸಲಿದೆ. ಯಾಂತ್ರಿಕವಾಗಿ ಈ ಕಸದ ರಾಶಿಯನ್ನು ಬೇರ್ಪಡಿಸುವ ಮೂಲಕ ಅಲ್ಲಿ ನಾಲ್ಕಾರು ಕಡೆಯಲ್ಲಿ ನಿರ್ಮಿಸಿರುವ ತೊಟ್ಟಿಗಳಲ್ಲಿ ಎಲ್ಲಾ ಕೊಳೆಯುವಂತಹ ಹಸಿ ಕಸವನ್ನು ತುಂಬಲಾಗುತ್ತದೆ. ಮನೆ, ಮಾರುಕಟ್ಟೆ, ಹೊಟೇಲ್ ಹಾಗೂ ಅಂಗಡಿಗಳಲ್ಲಿ ವ್ಯರ್ಥ ಗೊಂಡು ಕೊಳೆಯುವಂತಹ ತರಕಾರಿ, ಸೊಪ್ಪು ಸಹಿತ ಹಣ್ಣು-ಹಂಪಲುಗಳನ್ನು ತೊಟ್ಟಿಗಳಲ್ಲಿ ತುಂಬಿ, ದುರ್ವಾಸನೆ ನಡುವೆಯೂ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ.

ಈ ರೀತಿ ತಿಂಗಳುಗಟ್ಟಲೆ ತೊಟ್ಟಿ ಯೊಳಗೆ ಕೊಳೆಯುವ ತ್ಯಾಜ್ಯಗಳು ‘‘ಕಸದಿಂದ ರಸ’’ ಎಂಬಂತೆ ಗೊಬ್ಬರವಾಗಿ ಮಾರ್ಪಡಲಿವೆ. ಈ ಗೊಬ್ಬರವನ್ನು ಆಸಕ್ತ ರೈತರಿಗೆ ಅಲ್ಪ ಬೆಲೆಗೆ ನಗರ ಸಭೆಯಿಂದ ವಿತರಿಸಲಾಗುತ್ತಿದೆ.

ಮಡಿಕೇರಿಯ ಬಹುತೇಕ ನಾಗರಿಕರು ತಮ್ಮ ತಮ್ಮ ಮನೆಯಂಗಳದಲ್ಲಿ ಬೆಳೆಯುವ ಹೂ ಗಿಡಗಳಿಗೆ; ಕುಂಡಗಳಿಗೆ, ಹಿತ್ತಲಿನ ಸೊಪ್ಪು, ತರಕಾರಿ ಗಿಡಗಳಿಗೆ ಈ ಗೊಬ್ಬರ ಬಳಕೆಯಾಗುತ್ತಿದೆ.

ಒಂದು ರೀತಿಯಲ್ಲಿ ಕಾಯಕವೇ ಕೈಲಾಸ ಎಂಬ ನಾಣ್ನುಡಿಯಂತೆ, ನಗರಸಭೆಯ ಉದ್ದಗಲಕ್ಕೂ ನಿತ್ಯ ಎಲ್ಲೆಂದರಲ್ಲಿ ಎಸೆದಿರುವ ಕಸವನ್ನು ಕ್ರೋಢೀಕರಿಸುವ ದಿನಗೂಲಿ ನೌಕರರ ಪರಿಶ್ರಮ ಹಾಗೂ ಅವರ ಹಿಂದಿರುವ ಕರ್ತೃತ್ವಶಕ್ತಿಯ ಪ್ರಯೋಜನವನ್ನು ಈ ಬೆಟ್ಟ ಶ್ರೇಣಿಯ ತ್ಯಾಜ್ಯ ಸಂಗ್ರಹಾಗಾರದಲ್ಲಿ ಪ್ರತ್ಯಕ್ಷ ನೋಡಬಹುದಾಗಿದೆ.

ಇದರೊಂದಿಗೆ ಒಂದೊಮ್ಮೆ ನಗರದ ಬೀದಿ-ಬೀದಿಗಳಲ್ಲಿ ನಾಗರಿಕರು ಕಸ ತುಂಬಲೆಂದು ನಗರಸಭಾ ಆಡಳಿತ ತಂದಿರಿಸಿದ್ದ ಕಬ್ಬಿಣದ ಆ ಬೃಹತ್ ತೊಟ್ಟಿಗಳು ಕೂಡ ಇಲ್ಲಿ ಕಾಡುಪಾಲಾಗಿರುವ ದೃಶ್ಯ ಕಾಣುತ್ತಿದೆ.

ವರ್ಷದಿಂದ ವರ್ಷಕ್ಕೆ ಸಾಮಾಜಿಕ ಪರಿವರ್ತನೆಯ ನೈಜತೆ ಯನ್ನು ನಾವು ನಿರುಪಯುಕ್ತವೆಂದು ಪರಿಗಣಿಸುವ ತ್ಯಾಜ್ಯದಿಂದಲೂ ಮಾನವನ ಬದುಕು ಸಾಧ್ಯವೆಂಬ ಆಶಯ ಈ ಬೆಟ್ಟ ತಪ್ಪಲಿನಿಂದ ಮನವರಿಕೆಯಾಗಲಿದೆ.

-ಶ್ರೀಸುತ