ಮಡಿಕೇರಿ, ಜೂ. 13: ವಿಧಾನ ಸಭೆಯಲ್ಲಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಪೊಲೀಸ್ ಇಲಾಖೆಯಲ್ಲಿ ಕೊಡಗಿಗೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರ ಬಳಿ ಕೆಲ ವಿವರಣೆ ಬಯಸಿದರು.ಕೊಡಗಿನಲ್ಲಿ ಕಾರ್ಯನಿರ್ವ ಹಿಸುತ್ತಿರುವ ಒಟ್ಟು ಪೊಲೀಸ್ ಸಿಬ್ಬಂದಿಗಳೆಷ್ಟು? ಈ ಪೈಕಿ ಎಷ್ಟು ಮಂದಿಗೆ ವಸತಿ ಗೃಹ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ಬಯಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್ ಅವರು, ಕೊಡಗಿನಲ್ಲಿ ಒಟ್ಟು 873 ಮಂದಿ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು,

(ಮೊದಲ ಪುಟದಿಂದ) ಈ ಪೈಕಿ 94 ಅಧಿಕಾರಿ, 541 ಸಿಬ್ಬಂದಿಗೆ ಒಟ್ಟು 635 ವಸತಿ ಗೃಹಗಳನ್ನು ಕಲ್ಪಿಸಲಾಗಿದೆ. ರಾಜ್ಯಾದ್ಯಂತ 11,000 ವಸತಿ ಗೃಹಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದ್ದು, ಕೊಡಗಿನಲ್ಲಿ ಮೊದಲ ಹಂತದಲ್ಲಿ ಸಿಬ್ಬಂದಿಗಳಿಗೆ 168, ಎಸ್‍ಐಗಳಿಗೆ 6 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಸೋಮವಾರಪೇಟೆಯಲ್ಲಿ 2014-15ರಲ್ಲಿ ಒಟ್ಟು 21 ವಸತಿ ಗೃಹಗಳ ದುಸ್ತಿತಿಗಾಗಿ ರೂ. 21,97,000 ಅನುದಾನ ಬಿಡುಗಡೆ ಮಾಡಲಾಗಿದ್ದು, ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. 2016-17ರಲ್ಲಿ ಒಟ್ಟು 5 ವಸತಿ ಗೃಹಗಳ ದುರಸ್ತಿಗಾಗಿ 8,90,000 ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. 2017-18ನೇ ಸಾಲಿನ ಆಯವ್ಯಯದಲ್ಲಿ ಸೋಮವಾರಪೇಟೆ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಮೀಸಲಿಟ್ಟಿಲ್ಲ ಎಂದು ಸಚಿವರು ಮಾಹಿತಿಯಿತ್ತರು.