ಕೂಡಿಗೆ, ಜೂ. 13: ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 2017-18ನೇ ಸಾಲಿನ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ಇಂದು ಮದಲಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಾಗಿತ್ತು. ವಿವಿಧ ಚರ್ಚೆಗಳ ನಡುವೆಯೆ ಸಭೆ ಗೊಂದಲದ ಗೂಡಾಗಿ ಮಾರ್ಪಟ್ಟಿತು.ಸಭೆ ಪ್ರಾರಂಭವಾಗುತ್ತಿದ್ದಂತೆಯೇ ನಾಲ್ಕು ವಾರ್ಡ್ ಸಭೆಗಳ ವರದಿಯನ್ನು ಓದಲು ಪ್ರಾರಂಭಿಸಿದಾಗ ಹುದುಗೂರು ಆನೆ ಹಾವಳಿ ಮತ್ತು ರಸ್ತೆ ಕಾಮಗಾರಿ, ದೇವಾಲಯದ ಆವರಣದಲ್ಲಿ ಕಸವಿಲೇವಾರಿ ವಿಷಯವಾಗಿ ವಾರ್ಡ್ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರೂ, ವಾರ್ಡ್ ಸಭೆಯ ವರದಿಯಲ್ಲಿ ನೊಂದಣಿಯಾಗದಿರುವ ಬಗ್ಗೆ ಸ್ಥಳೀಯ ಗ್ರಾ.ಪಂ ಮಾಜಿ ಸದಸ್ಯ ಐ.ಎಸ್.ಗಣೇಶ್, ಚಾಮಿ ಮೊದಲಾದವರು ಸಭೆಯಲ್ಲಿ ಪ್ರಶ್ನಿಸಿದರು. ಅಧ್ಯಕ್ಷರಿಂದ ಸಮರ್ಪಕ ಉತ್ತರ ದೊರಕದ ಕಾರಣ ರಂಪಾಟ ಪ್ರಾರಂಭವಾಯಿತು.

ಕೂಡಿಗೆಯ ಮೊದಲ ವಾರ್ಡಿನಲ್ಲಿ ಹಾರಂಗಿ ನದಿಯ ಸಮೀಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಹಂದಿ ಮಾಂಸದ ಮಳಿಗೆಯನ್ನು ತೆರೆದಿರುವದರ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದವು.

ಪಡಿತರ ಚೀಟಿ ವಿತರಣೆ ಹಾಗೂ ಪಡಿತರ ವಸ್ತುಗಳ ವಿತರಣೆಯಲ್ಲಿ ನ್ಯಾಯಬೆಲೆ ಅಂಗಡಿಯವರು ಅಧಿಕವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರುಗ ಳಾದ ಕೆ.ಎಸ್.ಕಾಂತರಾಜ್, ಭದ್ರ, ಗಣೇಶ, ಜಗದೀಶ್, ಕುಮಾರ ಆರೋಪಿಸಿದರಲ್ಲದೆ, ಆಹಾರ ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದಿದ್ದರಿಂದ ಸಭೆಯನ್ನು ಮುಂದೂಡಿ ಎಂದು ಕೂಗಾಡತೊಡಗಿದರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಕ್ರಮಬದ್ಧವಾಗಿ ಆಹಾರ ವಸ್ತುಗಳನ್ನು ವಿತರಣೆ ಮಾಡುವಂತೆ ಆಹಾರ ಇಲಾಖೆಯ ನಿರೀಕ್ಷಕರಿಗೆ ಪತ್ರ ಬರೆಯಲಾಗುವದು ಎಂದರು.

ಕುಶಾಲನಗರ ಪಟ್ಟಣ ಪಂಚಾಯಿತಿಯ ಮತ್ತು ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಕಸ ವಿಲೇವಾರಿಯು ಕೂಡಿಗೆ ಗ್ರಾ.ಪಂ ವ್ಯಾಪ್ತಿಯ ಭುವನಗಿರಿಯಲ್ಲಿ ನಡೆಯುತ್ತಿದ್ದು, ಇದೇ ಜಾಗದಲ್ಲಿ ಕೂಡಿಗೆಯ ಕಸ ವಿಲೇವಾರಿಯು ನಡೆಯಬೇಕು. ಇದರ ಜೊತೆಯಲ್ಲಿ ಭುವನಗಿರಿ ಭಾಗದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಪತ್ರ ವ್ಯವಹರಿಸಬೇಕೆಂದು ಗ್ರಾಮಸ್ಥರು ಅಧ್ಯಕ್ಷರಿಗೆ ಮನವಿ ಮಾಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಕೆಲವು ಸದಸ್ಯರು ಮನೆಯ ಹಕ್ಕು ಪತ್ರವನ್ನು ಹಾಗೂ ನಿವೇಶನಗಳನ್ನು ನೀಡುತ್ತೇವೆ ಎಂದು ಹಣ ಪಡೆದಿದ್ದಾರೆ ಎಂದು ಕೆಲ ಗ್ರಾಮಸ್ಥರು ಆರೋಪಿಸಿದರು.

ನಂತರ ಬ್ಯಾಡಗೊಟ್ಟ ಗ್ರಾಮದಲ್ಲಿನ ಪರಿಶಿಷ್ಟ ಜಾತಿಯ ಕಾಲೋನಿಗೆ ಯಾವದೇ ರೀತಿಯ ಕಾಮಗಾರಿಗಳು ನಡೆದಿಲ್ಲ, ಇದುವರೆಗೂ ಸಮರ್ಪಕವಾಗಿ ಯಾವದೇ ಕೆಲಸಗಳನ್ನು ಗ್ರಾ.ಪಂ ವತಿಯಿಂದ ನಡೆಸಿಲ್ಲ ಎಂದು ಗ್ರಾಮಸ್ಥರುಗಳಾದ ಅಣ್ಣಯ್ಯ, ಗಣೇಶ್, ಸಾವಿತ್ರಮ್ಮ ದೂರಿದರು.

ಇಷ್ಟೆಲ್ಲಾ ವಿಷಯಗಳ ಬಗ್ಗೆ ಕೂಗಾಟ, ಗದ್ದಲಗಳ ನಡುವೆ ನಡೆದ ಚರ್ಚೆಯಲ್ಲಿ ಯಾವುದು ಕಾರ್ಯಗತಗೊಳ್ಳುವದಿಲ್ಲ. ಸುಮ್ಮನೆ ಏಕೆ ಗ್ರಾಮಸಭೆ ನಡೆಸುತ್ತಿರಾ ? ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿರುವದರಿಂದ ಸಭೆಯನ್ನು ಮುಂದೂಡಿ ಎಂದು ಸಭೆಯಲ್ಲಿದ್ದ 50ಕ್ಕೂ ಅಧಿಕ ಗ್ರಾಮಸ್ಥರುಗಳು ಕೂಗಾಟ ನಡೆಸಿದ ಸಂದರ್ಭ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಗದ್ದಲಗಳ ನಡುವೆ ಸಭೆಯನ್ನು ಹತೋಟಿಗೆ ತರಲು ಸಾಧ್ಯವಾಗದ ಸಂದರ್ಭ ಸಭೆಯನ್ನು ಮುಂದೂಡಲಾ ಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.

ಇತ್ತ ಗ್ರಾಮಸಭೆ, ಅತ್ತ ಮಕ್ಕಳಿಗೆ ಪಾಠ: ಕೂಡಿಗೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಮದಲಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ಕೂಗಾಟ, ಗದ್ದಲಗಳು ನಡೆಯುತ್ತಿದ್ದ ನಡುವೆಯೆ, ಇತ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿದ್ದುದು ಕಂಡು ಬಂತು.

ಗ್ರಾಮಸಭೆಯನ್ನು ಆಯೋಜಿಸುವವರು ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಭೆಯನ್ನು ಬೇರೆಡೆ ನಡೆಸದೆ ಶಾಲಾ ಆವರಣದಲ್ಲಿ ನಡೆಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ತಡೆಯಾಗಿ ವಿದ್ಯಾರ್ಥಿಗಳು ಕಿಟಕಿಗಳ ಮೂಲಕ ಗ್ರಾಮಸ್ಥರ ಕೂಗಾಟವನ್ನು ನೋಡುವದರ ಮೂಲಕ ಪುಕ್ಕಟೆ ಮನರಂಜನೆ ಪಡೆದರು.