ಸೋಮವಾರಪೇಟೆ, ಜೂ. 13: ಪರಿಸರವನ್ನು ಉಳಿಸಿ ಬೆಳೆಸಿದಷ್ಟೂ ನಮ್ಮ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ. ಇದೇ ನಿಟ್ಟಿನಲ್ಲಿ ನಮ್ಮ ಪೂರ್ವಜರು ದೇವರ ಕಾಡು, ಊರುಡುವೆ ಹೆಸರಿನಲ್ಲಿ ಪರಿಸರವನ್ನು ಉಳಿಸುವ ಕಾರ್ಯ ಮಾಡಿದ್ದರು. ಇಂದು ದೇವರ ಕಾಡನ್ನೂ ಬಿಡದೆ ಪರಿಸರ ನಾಶ ಮಾಡುತ್ತಿರುವದು ದುರಂತ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ವಿಷಾಧಿಸಿದರು.

ಸಮೀಪದ ಗೌಡಳ್ಳಿ ಗ್ರಾಪಂ ವ್ಯಾಪ್ತಿಯ ನಂದಿಗುಂದ ಸಹಿಪ್ರಾ ಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕು ಪತ್ರಕರ್ತರ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ ಹಾಗೂ ಅರಣ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಇಂದು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿರುವದು ದುರಂತ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕ ಒ.ಜೆ. ಗಣಪತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೀಲಾ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎ. ಭಾಸ್ಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಮೇಶ್, ಒಕ್ಕೂಟದ ಅಧ್ಯಕ್ಷ ಪ್ರವೀಣ್, ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೇಮನಾಥ್, ರೋಟರಿ ನಿರ್ದೇಶಕ ಮಂಜು ನೀಲಕಂಠಪ್ಪ, ಶಿಕ್ಷಕಿಯರುಗಳಾದ ಗಿರಿಜಾಂಬ ಹಾಗೂ ಎ.ಎನ್. ವಸಂತಿ, ಸೇವಾಪ್ರತಿನಿಧಿ ತಾರಾಮಣಿ ಉಪಸ್ಥಿತರಿದ್ದರು. ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.