ಸೋಮವಾರಪೇಟೆ, ಜೂ. 13: ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಕಂದಾಯ ಮನೆ ಕಂದಾಯವನ್ನು ಸಮಯಕ್ಕೆ ಸರಿಯಾಗಿ ಅನೇಕರು ಪಾವತಿಸುತ್ತಿಲ್ಲ. ನೀರಿನ ಕಂದಾಯ ಕಟ್ಟದವರಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಗೌಡಳ್ಳಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸ ಲಾಯಿತು. ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಧರ್ಮಾಚಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ ಗ್ರಾಮಸಭೆ ಯಲ್ಲಿ ಈ ಬಗ್ಗೆ ತೀರ್ಮಾನಿಸ ಲಾಯಿತು. ಸಾರ್ವಜನಿಕ ನಲ್ಲಿ ಸಂಪರ್ಕವನ್ನು ಕಡಿತಗೊಳಿಸಿ, ಪ್ರತಿ ಮನೆಗೆ ಮೀಟರ್ ಸಂಪರ್ಕವನ್ನು ನೀಡಲು ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಸರ್ಕಾರದ ಅಂಬೇಡ್ಕರ್ ನಿವಾಸಿ ಯೋಜನೆಯಡಿ ಪರಿಶಿಷ್ಟಜಾತಿ ಮತ್ತು ಪಂಗಡದ ವಸತಿಹೀನ ಫಲಾನುಭವಿಗಳು ಗ್ರಾಮ ಪಂಚಾಯಿತಿ ಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪಿಡಿಒ ಹೇಮಲತ ಹೇಳಿದರು. ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ತಿಳಿಸಿದರು.

ಅಂಗವಿಕಲರಿಗೆ ಸಹಾಯಧನ ವಿತರಿಸಲು ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ ಇದುವರೆಗೆ ಸಹಾಯಧನ ಏಕೆ ವಿತರಿಸಿಲ್ಲ? ಎಂದು ಸದಸ್ಯರಾದ ಎಸ್.ಎನ್. ಪೃಥ್ವಿ, ಹರೀಶ್ ಪ್ರಶ್ನಿಸಿದರು. ಅಂಗವಿಕಲರ ಕಾರ್ಡ್ ಪರಿಶೀಲಿಸಿ ಸೌಲಭ್ಯ ಒದಗಿಸಲಾಗು ವದು ಎಂದು ಪಿಡಿಒ ಭರವಸೆ ನೀಡಿದರು.

ಉದ್ಯೋಗ ಖಾತ್ರಿ ಹಾಗೂ 14ನೇ ಹಣಕಾಸಿನ ಯೋಜನೆಯಲ್ಲಿ ನಾಲ್ಕು ವರ್ಷಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪಿಡಿಒ ಸಭೆಗೆ ಮಾಹಿತಿ ನೀಡಿದರು. ಈ ಹಿಂದೆ ಪಂಚಾಯಿತಿಯಲ್ಲಿ ವಾಸದೃಢೀಕರಣ ಪತ್ರ ವಿತರಿಸಲಾಗುತ್ತಿತ್ತು. ಈ ಸಂದರ್ಭ ಕಂದಾಯ ವಸೂಲಿಯಾಗುತ್ತಿತ್ತು. ಆದರೆ ಈಗ ತಾಲೂಕು ಕಚೇರಿಯಲ್ಲಿ ವಾಸದೃಢೀಕರಣ ಪತ್ರ ವಿತರಿಸಲಾಗುತ್ತಿರುವದರಿಂದ ಪಂಚಾಯಿತಿ ಆದಾಯಕ್ಕೆ ಕತ್ತರಿ ಬಿದ್ದಿದೆ ಎಂದು ಪಂಚಾಯಿತಿ ಅಧ್ಯಕ್ಷ ಧರ್ಮಾಚಾರಿ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷೆ ನಾಗರತ್ನ, ಸದಸ್ಯರುಗಳಾದ ಸವಿತಾ, ಹೇಮಂತ್, ಲಕ್ಷ್ಮೀ, ಪ್ರೇಮ, ಶಿವಮ್ಮ ಉಪಸ್ಥಿತರಿದ್ದರು.