ವೀರಾಜಪೇಟೆ, ಜೂ. 13: ತಾಲೂಕು ಕೇಂದ್ರ ವೀರಾಜಪೇಟೆಗೆ ಆಧುನಿಕ ಸೌಲಭ್ಯಗಳಿಂದ ಕೂಡಿದ ಹೈಟೆಕ್ ಜೈಲು ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿ ಗೃಹಕ್ಕಾಗಿ ಸರಕಾರ ರೂ 7ಕೋಟಿ 40ಲಕ್ಷ ಹಣವನ್ನು ಮಂಜೂರು ಮಾಡಿದ್ದು ಮುಂದಿನ ಮೂರು ತಿಂಗಳೊಳಗೆ ಕಾಮಗಾರಿಗೆ ಸಿದ್ಧತೆ ನಡೆಯುತ್ತಿವೆ.

ಈಗಿನ ಯೋಜನೆಯಂತೆ ಸುಮಾರು ನೂರು ಮಂದಿ ಸಾಮಥ್ರ್ಯದ ಆಧುನಿಕ ಜೈಲು, ಕಾರಾಗೃಹ ಇಲಾಖೆಗೆ ಸೇರಿದ ಇಲ್ಲಿನ ಗಾಂಧಿನಗರದಲ್ಲಿರುವ ಅರವತ್ತು ಸೆಂಟು ಜಾಗದಲ್ಲಿ ಎರಡು ಅಂತಸ್ತು ಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಪ್ರತ್ಯೇಕ, ಪ್ರತ್ಯೇಕ ಐದು ಅಡುಗೆ ಮನೆಗಳು, ಸ್ನಾನದ ಮನೆಗಳು, ಶೌಚಾಲಯ, ದಿನಸಿ ಗೋದಾಮು, ನಿರುಪಯುಕ್ತ ವಸ್ತುಗಳ ಸಂಗ್ರಹದ ಗೋದಾಮು, ಜೈಲರ್ ಕಚೇರಿ, ಗೇಟ್‍ಕೀಪರ್ ಕಚೇರಿ, ವಿಚಾರಣಾಧೀನ ಬಂದಿಗಳ ಸಂದರ್ಶನ ಕೊಠಡಿ, ನಿರೀಕ್ಷಣಾ ಕೊಠಡಿ, ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್, ಕಾರ್ ಪಾರ್ಕಿಂಗ್ ಕಟ್ಟಡದ ಸುತ್ತ ಕಬ್ಬಿಣದ ಗ್ರಿಲ್ ಗೇಟ್‍ಗಳು, ಜೊತೆಗೆ ಭದ್ರತೆಗಾಗಿ ವಿದ್ಯುತ್ ಹರಿಯುವ ತಂತಿ ಬೇಲಿ, ಸಿ.ಸಿ. ಟಿ.ವಿ ಕ್ಯಾಮರಾಗಳು ಅಳವಡಿಸಲು ನಕಾಶೆಯಲ್ಲಿ ತೋರಿಸಲಾಗಿದೆ. ಈಗಿನ ದುಸ್ಥಿತಿಯಲ್ಲಿರುವ ಸಬ್‍ಜೈಲ್ ಅನ್ನು ನೆಲಸಮ ಮಾಡಿ ಅಲ್ಲಿರುವ 20 ಸೆಂಟು ಜಾಗದಲ್ಲಿ ಜೈಲು ಅಧಿಕಾರಿಗಳು ಸೇರಿದಂತೆ ಒಟ್ಟು 14 ಮಂದಿಗೆ ವಸತಿ ಗೃಹ ನಿರ್ಮಿಸಲು ಈಗಿನ ಅಂದಾಜು ವೆಚ್ಚದಲ್ಲಿ ಸೇರಿಸಲಾಗಿದೆ. ಮಂಜೂರಾತಿ ದೊರೆತಿರುವ ಹಣದಲ್ಲಿ ರೂ. 4 ಕೋಟಿ 50 ಲಕ್ಷ ಆಧುನಿಕ ಜೈಲು ಕಟ್ಟಡಕ್ಕೆ ವೆಚ್ಚವಾದರೆ ಉಳಿದ ರೂ. 2 ಕೋಟಿ 90 ಲಕ್ಷವನ್ನು ಆಧುನಿಕ ವಸತಿ ಗೃಹಕ್ಕೆ ವೆಚ್ಚ ಮಾಡಲು ಯೋಜನೆಯಲ್ಲಿ ನಮೂದಿಸಲಾಗಿದೆ.

ಈಗಾಗಲೇ ಕಾಮಗಾರಿಯ ಅಂದಾಜು ವೆಚ್ಚದ ವಿವರ ಹಾಗೂ ಯೋಜನೆಯ ನಕಾಶೆ ಬೆಂಗಳೂರಿನ ಕರ್ನಾಟಕ ಕಾರಾಗೃಹಗಳ ಮಹಾ ನಿರ್ದೇಶಕರ ಕಾರ್ಯಾಲಯದಲ್ಲಿದ್ದು ಮುಂದಿನ ತಿಂಗಳು ಕಾಮಗಾರಿ ಆರಂಭಕ್ಕಾಗಿ ಯೋಜನೆಯ ಕಡತ ಗಳನ್ನು ವಿರಾಜಪೇಟೆಯ ಲೋಕೋಪಯೋಗಿ ಇಲಾಖೆ ಕಚೇರಿಗೆ ಹಸ್ತಾಂತರಿಸಲು ಸಿದ್ಧತೆ ನಡೆದಿದೆ. ಇ-ಮೇಲ್ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಿದ ನಂತರ ಒಂದು ತಿಂಗಳ ಅವಧಿಯಲ್ಲಿ ಕಾಮಗಾರಿ ಆರಂಭಿಸಲಾಗುವದೆನ್ನ ಲಾಗಿದೆ.

2015-16ನೇ ಸಾಲಿನಲ್ಲಿ ಸರಕಾರ ಇದೇ ಯೋಜನೆಗೆ ರೂ ಆರು ಕೋಟಿ ಎಂಬತ್ತು ಲಕ್ಷ ಮಂಜೂರು ಮಾಡಿದ್ದು ಈಗ ಕಾಮಗಾರಿಯ ದರವನ್ನು ಪರಿಷ್ಕರಿಸಿ ಈಗಿನ ಅಂದಾಜು ವೆಚ್ಚ ರೂ. ಏಳು ಕೋಟಿ 40ಲಕ್ಷ ಮಂಜೂರಾತಿಗೆ ಹಸಿರು ನಿಶಾನೆ ತೋರಿಸಿದೆ.

ಅರ್ಧ ಶತಮಾನದ ಹಿಂದೆಯೇ ವೀರಾಜಪೇಟೆಯಲ್ಲಿ ಆರಂಭ ಗೊಂಡಿದ್ದ ಸಬ್‍ಜೈಲು ಇದರ ಒತ್ತಾಗಿ ಮಿನಿ ವಿಧಾನಸೌಧದ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ತಾ. 28-4-2014 ರಂದು ಜೈಲಿನ ಒಂದು ಭಾಗ ಜೆ.ಸಿ.ಬಿ ಯಂತ್ರದಿಂದ ಜಖಂಗೊಂಡು ಕೊಠಡಿಯ ಒಂದು ಭಾಗದ ಗೋಡೆ ಕುಸಿದು ಜೈಲಿಗೆ ಭದ್ರತೆ ಇಲ್ಲದ್ದರಿಂದ ಈ ಜೈಲ್‍ನಲ್ಲಿದ್ದ ಖೈದಿಗಳನ್ನು ತಾತ್ಕಾಲಿಕವಾಗಿ ಮಡಿಕೇರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಈಗಲೂ ಸಬ್‍ಜೈಲು ದುರಸ್ತಿಯಲ್ಲಿ ರುವದರಿಂದ ತಾಲೂಕಿನ ವಿರಾಜಪೇಟೆಯ ಸಮುಚ್ಚಯ ನ್ಯಾಯಾಲಯ ಪೊನ್ನಂಪೇಟೆಯ ನ್ಯಾಯಾಲಯ ಹಾಗೂ ಎಲ್ಲ ಪೊಲೀಸ್ ಠಾಣೆಗಳು ಮಡಿಕೇರಿಯ ಕರ್ಣಂಗೇರಿಯಲ್ಲಿರುವ ಕೇಂದ್ರ ಕಾರಾಗೃಹವನ್ನು ಅವಲಂಬಿಸಿದೆ. ಈ ಆಧುನಿಕ ಜೈಲು ನಿರ್ಮಾಣಗೊಂಡರೆ ತಾಲೂಕಿನ ಕುಟ್ಟ, ಶ್ರೀಮಂಗಲ, ಸಿದ್ದಾಪುರ, ಗೋಣಿಕೊಪ್ಪಲು, ಪೊನ್ನಂಪೇಟೆ, ವೀರಾಜಪೇಟೆ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳು, ತಾಲೂಕಿನ ನ್ಯಾಯಾಲಯ ಗಳಿಗೆ ಅನುಕೂಲವಾಗಲಿದೆ.

ಈ ಹಿಂದೆ ಇದ್ದ ಕರ್ನಾಟಕ ಕಾರಾಗೃಹ ಇಲಾಖೆಯ ಮಹಾ ನಿರ್ದೇಶಕರು ದುಸ್ಥಿತಿಯಲ್ಲಿದ್ದ ಈ ಜೈಲನ್ನು ಕೆ.ಆರ್. ನಗರದ ಸಬ್‍ಜೈಲ್‍ಗೆ ಸ್ಥಳಾಂತರಿಸಲು ಮುಂದಾಗಿದ್ದಾಗ ವೀರಾಜಪೇಟೆ ವಕೀಲರ ಸಂಘ ಹಾಗೂ ಇತರರು ವಿರೋಧಿಸಿ ಸರಕಾರದ ಮೇಲೆ ಒತ್ತಡ ಹೇರಿದ್ದರಿಂದ ಈಗ ತಾಲೂಕಿನ ಜನತೆ ನೂರು ಮಂದಿ ವಿಚಾರಣಾಧೀನ ಖೈದಿಗಳ ಸಂಖ್ಯೆಯ ಆಧುನಿಕ ಸಬ್ ಜೈಲ್ ಅನ್ನು ಕಾಣುವಂತಾಗಿದೆ.

ಕೆಲವು ತಿಂಗಳ ಹಿಂದೆ ಕುಶಾಲನಗರದ ವಕೀಲ ವೃಂದ ವೀರಾಜಪೇಟೆ ಸಬ್‍ಜೈಲ್‍ನ್ನು ಕುಶಾಲನಗರಕ್ಕೆ ಸ್ಥಳಾಂತರಿಸುವಂತೆ ಸರಕಾರ ಹಾಗೂ ಇಲಾಖೆಗೆ ಮನವಿ ಸಲ್ಲಿಸಿತ್ತು. ಈ ಎಲ್ಲವನ್ನು ಪರಿಶೀಲಿಸಿದ ರಾಜ್ಯ ಕಾರಾಗೃಹ ಇಲಾಖೆಯ ಉನ್ನತಾಧಿಕಾರಿಗಳ ಸಮಿತಿ ಈ ಹಿಂದೆ ಸಬ್ ಜೈಲು ಇದ್ದ ಜಾಗದಲ್ಲಿಯೇ ಮುಂದುವರೆ ಸಲು ಆದೇಶ ನೀಡಿತ್ತು. ಇದರಿಂದ 50 ವರ್ಷಗಳಿಗೂ ಅಧಿಕ ಕಾಲದಿಂದ ವೀರಾಜಪೇಟೆ ಯಲ್ಲಿರುವ ಜೈಲ್‍ಗೆ ಶಾಶ್ವತ ನೆಲೆ ದೊರೆ ತಂತಾಗಿದೆ.