ಮಡಿಕೇರಿ, ಜೂ. 13: ವಿವಿಧ ಬಗೆಯ ತೋಟಗಾರಿಕಾ ಉತ್ಪನ್ನಗಳ ಬೇಡಿಕೆ ಹಾಗೂ ಉತ್ಪಾದನೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವ ನಿಟ್ಟಿನಲ್ಲಿ ಹೊಸ ಪರಿಕಲ್ಪನೆಯ ಪ್ರಯತ್ನವೊಂದನ್ನು ನಡೆಸಲಾಗಿದೆ. ವಿವಿಧ ವರ್ಗಗಳ ರೈತರನ್ನು ಅದರಲ್ಲೂ ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸಂಘಟಿಸಿ ತೋಟಗಾರಿಕಾ ರಂಗದಲ್ಲಿ ಸ್ವಾವಲಂಬನೆ ಹಾಗೂ ಸದೃಢತೆ ಸ್ಥಾಪಿಸುವದರ ಜೊತೆಗೆ ತೋಟಗಾರಿಕಾ ಬೆಳೆಗಳ ಉತ್ಪಾದಕರ ಮಾರುಕಟ್ಟೆ ಅವಕಾಶಗಳ ಮಾಹಿತಿ ಒದಗಿಸುವದು ಹಾಗೂ ಉತ್ಪಾದಕರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕದ ಸರಪಳಿ ಏರ್ಪಡಿಸುವದು ಈ ಹೊಸ ಯೋಜನೆಯ ಉದ್ದೇಶವಾಗಿದೆ. ಇದರಂತೆ ಕಂಪೆನಿಯ ಅಧಿನಿಯಮದಡಿ ರೈತ ಉತ್ಪಾದಕರ ಸಂಸ್ಥೆಗಳನ್ನು ನೋಂದಾಯಿಸಿ ಸ್ವಯಂ ಅಧಿಕಾರ ಮುಕ್ತ ಸಂಸ್ಥೆಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರಕಾರ ಯೋಜನೆ ರೂಪಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಮೂಲಕ ತೋಟಗಾರಿಕಾ ಇಲಾಖೆ ಮೂಲಕ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ರೈತ ಸಂಸ್ಥೆಗಳು ಸಹಕಾರ ಸಂಘಗಳ ನಿಯಮದಡಿಯಲ್ಲಿ ನೋಂದಣಿಯಾಗುತ್ತವೆ. ಆದರೆ ಈ ಹೊಸ ಯೋಜನೆಯಂತೆ ಕಂಪೆನಿ ಅಧಿನಿಯಮದಡಿ ರೈತ ಉತ್ಪಾದಕರ ಸಂಸ್ಥೆ (ಕಂಪೆನಿ)ಯನ್ನು ನೋಂದಣಿ ಮಾಡಿ ಖಾಸಗಿ ಸಂಸ್ಥೆಗಳ ಮಾದರಿ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಸರಕಾರದ ಮೂಲಕ 3 ವರ್ಷಗಳ ಕಾಲ ಅಗತ್ಯ ಸಹಕಾರ ನೀಡಿ ಬಳಿಕ ಸಂಸ್ಥೆಗೆ ಸ್ವತಂತ್ರ ಕಾರ್ಯನಿರ್ವಹಣೆಗೆ ಬಿಡಲಾಗುತ್ತದೆ. ಈ ಮೂರು ವರ್ಷದಲ್ಲೂ ಕಂಪೆನಿಗೆ ಸರಕಾರದಿಂದ ಹೊರಗಿನ ಸಹಕಾರವಿರುತ್ತದೆಯೇ ಹೊರತು ನೇರ ಹಸ್ತಕ್ಷೇಪವಿರುವದಿಲ್ಲ.

ಇದರಂತೆ ಜಿಲ್ಲೆಯಲ್ಲಿ ಪ್ರಥಮ ರೈತ ಉತ್ಪಾದಕರ ಸಂಸ್ಥೆ ಭಾಗಮಂಡಲದಲ್ಲಿ ಅಸ್ತಿತ್ವಕ್ಕೆ ಬಂದಿದೆ. ‘ಶ್ರೀ ಭಗಂಡೇಶ್ವರ ಹಾರ್ಟಿಕಲ್ಚರ್ ಫಾರ್ಮಸ್‍ನ ಪ್ರೊಡ್ಯೂಸಲ್ ಕಂಪೆನಿ ಲಿಮಿಟೆಡ್’ ಹೆಸರಿನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದೆ.

ರೂ. ಒಂದು ಸಾವಿರ ಪಾಲು ಹಣದಂತೆ ಒಟ್ಟು 1040 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಈ ಕಂಪೆನಿಗೆ ಸರಕಾರದಿಂದ ರೂ. 15 ಲಕ್ಷ ದುಡಿಯುವ ಬಂಡವಾಳ ನೀಡಲಾಗಿದೆ. ಇದು ಸೇರಿದಂತೆ ರೈತರಿಂದ ರೂ. 10 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು, ರೂ. 25ಲಕ್ಷ ದುಡಿಯುವ ಬಂಡವಾಳದೊಂದಿಗೆ ಹೊಸ ಸಂಸ್ಥೆ ಕಾರ್ಯ ಚಟುವಟಿಕೆಗೆ ಇಳಿದಿದೆ.

ಇದರೊಂದಿಗೆ ಇಲಾಖೆ ಮೂಲಕ ರೂ. 25 ಲಕ್ಷದಷ್ಟು ಮೌಲ್ಯದ ಯಂತ್ರೋಪಕರಣಗಳನ್ನು ಒದಗಿಸಲಾಗಿದೆ. ಇದನ್ನು ಬಳಸಿಕೊಂಡು ಸಂಸ್ಥೆ ಮುಂದಡಿಯಿಡುತ್ತಿದೆ.

ಉತ್ಪನ್ನಗಳನ್ನು ನಿಗದಿತ ದರಕ್ಕೆ ಖರೀದಿಸಿ ಸಂಸ್ಥೆಯ ಹೆಸರಿನಲ್ಲಿ ಬ್ರ್ಯಾಂಡ್ ಮಾಡಿ ಮಾರಾಟ ಮಾಡಲಾಗುವದು. ಇದರೊಂದಿಗೆ ರೈತರಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರಗಳು, ಸಸ್ಯ ಸಂರಕ್ಷಣೆ ಔಷಧಿಗಳು ಮತ್ತು ಇತರ ಪರಿಕರಗಳನ್ನು ಸ್ಥಳೀಯ

(ಮೊದಲ ಪುಟದಿಂದ) ಮಾರುಕಟ್ಟೆ ದರಗಳಿಗಿಂತ ಕಡಿಮೆ ದರದಲ್ಲಿ ಒದಗಿಸುವದು, ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವದು ಸೇರಿದಂತೆ ಇನ್ನಷ್ಟು ವ್ಯವಹಾರಗಳನ್ನು ಸಂಸ್ಥೆ ಮಾಡಬಹುದಾಗಿದೆ.

20 ಜನರ ರೈತ ಆಸಕ್ತ ಗುಂಪುಗಳ ಒಟ್ಟು 52 ಗುಂಪಿನಿಂದ 1040 ರೈತರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಇವರಲ್ಲಿ ಅಧ್ಯಕ್ಷರು, ಓರ್ವ ಉಪಾಧ್ಯಕ್ಷ ಸೇರಿದಂತೆ 15 ಮಂದಿಯ ಸಮಿತಿ ರಚಿಸಲಾಗಿದೆ. ಆಡಳಿತಕ್ಕೆ ಓರ್ವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಾಲ್ಕು ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಲಾಗಿದ್ದು, ಆರಂಭದ ಮೂರು ವರ್ಷ ಸರಕಾರದಿಂದ ವೇತನ ನೀಡಲಾಗುವದು. ಕಳೆದ ಎರಡು ವರ್ಷದಿಂದ ತೋಟಗಾರಿಕೆ ಇಲಾಖೆ ಮೂಲಕ ಈ ಪ್ರಯತ್ನ ಆರಂಭವಾಗಿದ್ದು, ಈ ಕಂಪೆನಿ ಇದೀಗ ಐದಾರು ತಿಂಗಳಿಂದ ಸಣ್ಣ ಪ್ರಮಾಣದಲ್ಲಿ ವ್ಯವಹಾರ ಪ್ರಾರಂಭಿಸಿದೆ.

ಪ್ರಸ್ತುತ ಏಲಕ್ಕಿ, ಕರಿಮೆಣಸು, ಕಾಫಿ, ತೆಂಗಿನಎಣ್ಣೆಯನ್ನು ಬ್ರ್ಯಾಂಡ್ ಮಾಡಲಾಗಿದೆ. ಮಧ್ಯವರ್ತಿಗಳಿಲ್ಲದೆ ನೇರವಾಗಿ ರೈತರಿಗೆ ಅಗತ್ಯ ಉತ್ಪನ್ನಗಳನ್ನು ಇತರ ಕಂಪೆನಿಗಳಿಂದ ಖರೀದಿಸಿ ನೀಡುವದರಿಂದ ಕಡಿಮೆ ದರದಲ್ಲಿ ರೈತರಿಗೆ ಲಭ್ಯವಾಗುತ್ತಿವೆ. ಪ್ರಸ್ತುತ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ಕಚೇರಿ ಪ್ರಾರಂಭಿಸಲಾಗಿದೆ. ಕಚೇರಿ ಪ್ರಾರಂಭಗೊಂಡಿದೆ ಸಂಸ್ಕರಣಾ ಘಟಕದಂತಹ ಕಟ್ಟಡ ನಿರ್ಮಾಣಕ್ಕೆ ಜಾಗ ಲಭ್ಯವಾದಲ್ಲಿ ಶೇ. 90 ರಷ್ಟು ಹಣವನ್ನು ಸರಕಾರ ನೀಡಲಿದ್ದು, ಸಂಸ್ಥೆ ಶೇ. 10 ರನ್ನು ಭರಿಸಬೇಕಿದೆ.

ಸಣ್ಣ ರೈತರ ಕೃಷಿ ವ್ಯವಹಾರದ ಒಕ್ಕೂಟ (Sಈಂಅ) ದೆಹಲಿ, ಇದರಡಿಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಂಡಿಯನ್ ಸೊಸೈಟೀಸ್ ಫಾರ್ ಅಗ್ರಿ ಬಿಸ್‍ನೆಸ್ ಪ್ರೊಫೆಷನಲ್ (ಐಸಾಕ್) ಸಂಸ್ಥೆ ನೋಡಲ್ ಏಜೆನ್ಸಿಯಾಗಿ ಉಸ್ತುವಾರಿ ನಡೆಸುತ್ತಿದೆ. ಭಾಗಮಂಡಲ ಹೋಬಳಿಯ, ಭಾಗಮಂಡಲ, ಚೇರಂಬಾಣೆ, ತಣ್ಣಿಮಾನಿ, ಕಾರುಗುಂದ, ಕರಿಕೆ ವಿಭಾಗದ ಗ್ರಾಮಗಳ ರೈತರಿಗೆ ಇದು ಪ್ರಯೋಜನಕಾರಿಯಾಗಲಿದೆ. ಮೂರು ವರ್ಷ ಸರಕಾರದ ನೆರವು ಸಿಗಲಿದ್ದು, ಬಳಿಕ ಸಂಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕಿದೆ.