ಮಡಿಕೇರಿ, ಜೂ. 13: ಕೊಡಗು ಜಿಲ್ಲೆಯಲ್ಲಿ 2014 ರಿಂದ 2017ರ ಅವಧಿವರೆಗೆ ಒಟ್ಟು 27 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ವಿಧಾನ ಪರಿಷತ್‍ನಲ್ಲಿ ಮಾಹಿತಿಯಿತ್ತರು.ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಪ್ರಶ್ನೆಗೆ ಸಚಿವರು ವಿವರಣೆ ನೀಡಿದರು. 27 ಮಂದಿ ರೈತರು 4 ವರ್ಷಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇವುಗಳಲ್ಲಿ ಪ್ರಕರಣಗಳನ್ನು ಅರ್ಹ ಪ್ರಕರಣಗಳೆಂದು ಪರಿಗಣಿಸಿ ರೂ. 50 ಲಕ್ಷದವರೆಗೆ ಪರಿಹಾರ ಧನ ವಿತರಿಸಲಾಗಿದೆ. 2 ಪ್ರಕರಣಗಳು, ತೀರ್ಮಾನಿಸಲು ಬಾಕಿ ಉಳಿದಿದೆ ಎಂದು ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆಗೆ ಮನವಿ

ಮಡಿಕೇರಿ ಗಾಂಧಿ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರ ಬಳಿ ಸುನಿಲ್ ಸುಬ್ರಮಣಿ ಮಾಹಿತಿ ಬಯಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗಾಂಧಿ ಮೈದಾನವು ನಗರಸಭೆಗೆ ಸೇರಿದ

(ಮೊದಲ ಪುಟದಿಂದ) ಮೈದಾನವಾಗಿದ್ದು, ಇದರ ಪಕ್ಕದಲ್ಲಿಯೇ ಶಾಲೆ ಇದೆ. ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ಇದೇ ಮೈದಾನದಲ್ಲಿ ನಿಲ್ಲುತ್ತವೆ. ಇದರಿಂದ ಮೈದಾನದಲ್ಲಿ ಕಾರ್ಯಕ್ರಮಗಳಿಗೆ ಕ್ರೀಡಾ ಚಟುವಟಿಕೆ ಗಳಿಗೆ ಆಡಚಣೆಯಾಗುತ್ತಿರುತ್ತದೆ.

ದಿನಾಂಕ 2.1.2016 ರಂದು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಅದರಂತೆ ಗಾಂಧಿ ಮೈದಾನದ ಪಕ್ಕದ ಕರ್ಣಂಗೇರಿ ಕಂದಾಯ ಸರ್ವೆ ನಂ. 470/1ಎ ರಲ್ಲಿ 4.40 ಎಕರೆ ಜಾಗವನ್ನು ಪಾರ್ಕಿಂಗ್ ವ್ಯವಸ್ಥೆಗೆ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.