ಕುಶಾಲನಗರ, ಜೂ. 13: ಜಿಲ್ಲೆಯಲ್ಲಿ ಮುಂಗಾರು ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಜನಜೀವನ ಅಸ್ತವ್ಯಸ್ತವಾಗುತ್ತಿದ್ದರೆ ಮಡಿಕೇರಿ-ಕುಶಾಲನಗರ ನಡುವೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ದೂರಸಂಪರ್ಕ ಇಲಾಖೆ ಭೂಗತ ಕೇಬಲ್ ಅಳವಡಿಸಲು ಪ್ರಾರಂಭಿಸಿದ ಕಾಮಗಾರಿಯಿಂದ ಹೆದ್ದಾರಿ ಸಂಚಾರ ವ್ಯವಸ್ಥೆ ಅಪಾಯದ ಅಂಚಿಗೆ ಸಿಲುಕಿರುವ ಅಂಶ ಕಂಡುಬಂದಿದೆ.

ಮಂಗಳೂರಿನಿಂದ ಮೈಸೂರು ವ್ಯಾಪ್ತಿಯಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತ್ ಸಂಚಾರ್ ನಿಗಮ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸಲು ಹೆದ್ದಾರಿ ಬದಿಯಲ್ಲಿ ಭಾರೀ ಆಳದ ಕಂದಕ ತೋಡುತ್ತಿದ್ದು, ಇದರಿಂದ ರಸ್ತೆ ಬದಿಯಲ್ಲಿ ಮಣ್ಣಿನ ರಾಶಿಯಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾ ಗುತ್ತಿರುವ ದೃಶ್ಯ ಗೋಚರಿಸಿದೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆಲವೆಡೆ ರಸ್ತೆ ಕೆಸರುಮಯವಾಗುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಜನಸಂಚಾರಕ್ಕೆ ಕೂಡ ತೊಡಕುಂಟಾಗಿದೆ. ಈ ಹಿಂದೆ ರಸ್ತೆ ಅಗಲೀಕರಣ ಸಂದರ್ಭ ಛಿದ್ರಗೊಂಡ ಭೂಗತ ದೂರವಾಣಿ ಕೇಬಲ್‍ಗಳನ್ನು ಅಳವಡಿಸಲು ನೂರಾರು ಕಾರ್ಮಿಕರು ಕಂದಕ ತೋಡುತ್ತಿದ್ದು ಇದನ್ನು ಮುಚ್ಚುವಲ್ಲಿ ವಿಳಂಬವಾಗುತ್ತಿರುವದು ಈ ಅವಾಂತರಕ್ಕೆ ಕಾರಣವಾಗಿದೆ.

ಬೆಂಗಳೂರಿನಿಂದ ಕೇರಳದ ಎರ್ನಾಕುಲಂ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಯೋಜನೆಯಲ್ಲಿ ಸ್ಥಳೀಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಒನ್ ಇಂಡಿಯಾ ಯೋಜನೆಯಲ್ಲಿ ನೂತನ ವ್ಯವಸ್ಥೆ ಜಾರಿಗೊಳಿಸ ಬೇಕಾಗಿದೆ. ಆದರೆ ಅಪಾಯಕಾರಿ ತಿರುವು ಹೊಂದಿರುವ ಹಾಗೂ ಅತಿಯಾಗಿ ವಾಹನ ಸಂಚಾರದ ದಟ್ಟಣೆಯಿರುವ ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿ ಮಳೆಗಾಲದ ಅವಧಿಯಲ್ಲಿ ಕಾಮಗಾರಿ ನಡೆಯುತ್ತಿರುವದು ಈ ಅವಾಂತರಕ್ಕೆ ಕಾರಣ. ಇದನ್ನು ತಕ್ಷಣ ಸ್ಥಗಿತಗೊಳಿಸಿ ಮಳೆಗಾಲದ ನಂತರ ಇದಕ್ಕೆ ಅವಕಾಶ ನೀಡಿದರೆ ಒಳಿತು ಎಂದು ವಾಹನ ಸವಾರರು ಮತ್ತು ನಾಗರಿಕರು ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಿಂದ ಕುಶಾಲನಗರದೆಡೆಗೆ ಸಾಗುವ ತಿರುವು ರಸ್ತೆಗಳಲ್ಲಿ ಹಾಗೂ ಮೋರಿಗಳ ಬಳಿ ಈ ಕಾಮಗಾರಿ ನಡೆಯುತ್ತಿದ್ದು, ಹಲವು ಅಪಘಾತಗಳು ಉಂಟಾಗುತ್ತಿವೆ. ಟಾರ್ ರಸ್ತೆಯಲ್ಲಿ ಮಣ್ಣು ತುಂಬಿ ದ್ವಿಚಕ್ರ ವಾಹನಗಳು ಅವಘಡಕ್ಕೆ ಒಳಗಾಗುತ್ತಿವೆ. ಸುಂಟಿಕೊಪ್ಪ ಪಟ್ಟಣ ಈ ಕಾಮಗಾರಿ ನಡೆದ ಹಿನ್ನೆಲೆಯಲ್ಲಿ ಸಂಪೂರ್ಣ ಕೆಸರುಮಯವಾಗಿದೆ. ಶಾಲಾ ಮಕ್ಕಳಿಗೆ ರಸ್ತೆಯಿಂದ ಶಾಲೆಗೆ ತೆರಳಲು ಅನಾನುಕೂಲವಾಗುವದ ರೊಂದಿಗೆ ಕೆಸರು ಮೆತ್ತಿಕೊಂಡು ಶಾಲೆಗೆ ಹಾಜರಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೋಯಿಕೇರಿ ಬಳಿ ಸರಕಾರಿ ಶಾಲೆ ಬದಿ ರಸ್ತೆಯುದ್ದಕ್ಕೂ ಬೃಹತ್ ಕಂದಕಗಳನ್ನು ತೋಡಿದ್ದು, ಈ ಬಗ್ಗೆ ಕೂಡಲೇ ಗಮನಹರಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಮಕ್ಕಳ ಪೋಷಕರು. ಕೂಡಲೇ ಸಂಬಂಧಿಸಿದ ಇಲಾಖೆಗೆ ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡುವದ ರೊಂದಿಗೆ ಅಪಾಯ ಸಂಭವಿಸುವ ಮುನ್ನ ಜಾಗೃತಗೊಳ್ಳಬೇಕಾಗಿದೆ.

- ಚಂದ್ರಮೋಹನ್