ಮಡಿಕೇರಿ, ಜೂ. 13: ಜನರಿಗೆ ರೋಗಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ವೈದ್ಯರು ನೀಡಬೇಕು. ಕೇವಲ ಔಷಧ ಕೊಡುವದಷ್ಟೇ ಅವರ ಕೆಲಸವಲ್ಲ. ಬದಲಾಗಿ ರೋಗಗಳು ಮರುಕಳಿಸದಂತೆ ತಡೆಯುವ ಜವಾಬ್ದಾರಿಯನ್ನು ಹೊತ್ತು ಸಮಾಜವನ್ನು ಆರೋಗ್ಯಪೂರ್ಣವಾಗಿಸಲು ಪ್ರಯತ್ನಿಸಬೇಕು ಎಂದು ದಾವಣಗೆರೆಯ ಅಶ್ವಥ್ ಆಯುರ್ವೇದ ಪಂಚಕರ್ಮ ಚಿಕಿತ್ಸಾಲಯದ ವೈದ್ಯ ಪ್ರವೀಣ್ ಅಭಿಪ್ರಾಯಪಟ್ಟರು. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಮತ್ತು ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಕೊಡಗು ಜಿಲ್ಲಾ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ನಡೆದ ನಿರಂತರ ವೈದ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಆರೋಗ್ಯದ ಕುರಿತು ಜನಸಾಮಾನ್ಯರಲ್ಲಿ ಅನೇಕ ಭ್ರಮೆಗಳಿವೆ. ಹಸಿ ಸೊಪ್ಪು ತರಕಾರಿಗಳ ಸೇವನೆ, ಅತಿಯಾಗಿ ವ್ಯಾಯಾಮ ಮಾಡುವದು. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವದು, ಮೊಳಕೆ ಬಂದ ಧಾನ್ಯಗಳನ್ನು ತಿನ್ನುವದು, ಮೊಸರು ತಂಪು ಎಂದು ಭಾವಿಸಿ ಹೆಚ್ಚು ಮೊಸರು ಸೇವಿಸುವದು, ವಿರುದ್ದಾಹಾರಗಳ ಸೇವನೆ ಮೊದಲಾದವುಗಳ ಕುರಿತು ಆಯುರ್ವೇದದ ಭದ್ರವಾದ ಸಿದ್ಧಾಂತಗಳ ಆಧಾರದ ಮೇಲೆ ಜನರನ್ನು ಎಚ್ಚರಿಸಿ ಅವರ ಆರೋಗ್ಯವನ್ನು ಸುಧಾರಿಸಬೇಕು ಎಂದು ಕರೆಯಿತ್ತರು.

ಹಿಮಾಲಯ ಡ್ರಗ್ ಕಂಪೆನಿಯ ಸಂಶೋಧನೆ ಮತ್ತು ಅಭಿವೃದ್ದಿ ವಿಭಾಗದ ವ್ಯವಸ್ಥಾಪಕಿ ಡಾ|| ಅರ್ಚನಾ ಹೆಗಡೆ ಆ್ಯಂಟಿಬಯೋಟಿಕ್ ಔಷಧಗಳನ್ನು ಅನಗತ್ಯವಾಗಿ ಬಳಸುವ ಪ್ರವೃತ್ತಿಯನ್ನು ಖಂಡಿಸಿ ದೇಹದಲ್ಲಿ ವೈರಾಣುಗಳನ್ನು ನಿಗ್ರಹಿಸುವ ಬಲವಿದೆ. ಅದನ್ನು ಹೆಚ್ಚಿಸುವ ಉಪಾಯಗಳನ್ನು ಜನಪ್ರಿಯಗೊಳಿಸಬೇಕಾಗಿದೆ ಎಂದರು.

ಹೊನ್ನಾಳಿಯ ಡಾ|| ಜಿತೇಂದ್ರ ಬಸ್ತಿ ಅವರು ವಿವಿಧ ರೋಗಗಳನ್ನು ತಡೆಯುವ ಆಹಾರ ವಿಧಾನಗಳ ವಿವರಗಳನ್ನಿತ್ತು ರೋಗಿಗಳಿಗೆ ವೈದ್ಯರು ಆರೋಗ್ಯ ಶಿಕ್ಷಣ ನೀಡುವ ಶಿಕ್ಷಕರಾಗಬೇಕು. ಅವರ ಶಾರೀರಿಕ, ಬೌದ್ದಿಕ ಮತ್ತು ಮಾನಸಿಕ ಸ್ಥಿತಿಗಳನ್ನು ಅರಿಯಬೇಕು. ರೋಗಿಗಳೊಂದಿಗೆ ಸುದೀರ್ಘವಾಗಿ ಮಾತನಾಡಿ ಅವರ ಎಲ್ಲಾ ಸಮಸ್ಯೆಗಳ ಮಾಹಿತಿ ಪಡೆದ ನಂತರವೇ ಚಿಕಿತ್ಸೆ ಆರಂಭಿಸಬೇಕು. ಎಂದು ಕಿವಿಮಾತು ಹೇಳಿದರು.

ಬಳಿಕ ನಡೆದ ವಿಚಾರ ವಿನಿಮಯದಲ್ಲಿ ಡಾ. ಪದ್ಮನಾಭ, ಡಾ. ಉದಯ ಕುಮಾರ್, ಡಾ. ಈಶ್ವರಿ, ಡಾ. ಮಹೇಶ್, ಡಾ. ಜಯರಾಮ್, ಡಾ. ರಾಜಾರಾಮ್, ಡಾ.ಉದಯ ಶಂಕರ್, ಡಾ.ರಾಜಾರಾಮ ಶೆಟ್ಟಿ, ಡಾ. ಮಮತಾ, ಡಾ. ಯಜÐ, ಡಾ. ರೋಷನ್ ಮೊದಲಾದವರು ಭಾಗವಹಿಸಿದ್ದÀರು. ಜಿಲ್ಲೆಯ ವೈದ್ಯರು ಭಾಗವಹಿಸಿ ರುಗ್ಣ ಪತ್ರಿಕೆ ಮತ್ತು ಪಥ್ಯಾಪಥ್ಯ ವಿಷಯಗಳಲ್ಲಿ ತರಬೇತಿ ಪಡೆದರು. ಆರಂಭದಲ್ಲಿ ಕಾರ್ಯದರ್ಶಿ ಡಾ ಪ್ರಕಾಶ ಕುಲಕರ್ಣಿ ಸಂಘಟನಾತ್ಮಕ ಸಂಗತಿಗಳ ಮಾಹಿತಿಯಿತ್ತರು. ಡಾ. ಶ್ಯಾಮ್ ಅತಿಥಿಗಳನ್ನು ಪರಿಚಯಿಸಿ, ಡಾ. ಎಚ್.ಆರ್. ಅಮೂಲ್ಯ ನಿರೂಪಿಸಿದರು. ಹಿಮಾಲಯ ಡ್ರಗ್ ಕಂಪೆÀನಿ ಕಾರ್ಯಕ್ರಮವನ್ನು ಪ್ರಾಯೋಜಿಸಿತ್ತು.