ಮಡಿಕೇರಿ, ಜೂ.13 : ಶಿಶು ಮತ್ತು ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವದರ ಜೊತೆಗೆ ಆಸ್ಪತ್ರೆಗೆ ಬಂದ ಶಿಶು ಮತ್ತು ತಾಯಂದಿರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸಲಹೆ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಿಶು ಮತ್ತು ತಾಯಿ ಮರಣ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ಶಿಶು ಮತ್ತು ತಾಯಿ ಮರಣ ಸಂಬಂಧಿಸಿದಂತೆ ಹಲವು ಪ್ರಕರಣ ಗಳನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸ್ಸು ಮಾಡಲಾಗಿದೆ. ಕೊಡಗಿನಲ್ಲಿ ವೈದ್ಯಕೀಯ ಕಾಲೇಜು ಇದ್ದು ಸಹ ಸಮರ್ಪಕ ಚಿಕಿತ್ಸಾ ಸೌಲಭ್ಯವಿಲ್ಲವೇ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸಿದರು.

ವೈದ್ಯರು ಜವಾಬ್ದಾರಿಯಿಂದ ನುಣುಚಿಕೊಳ್ಳುವದನ್ನು ಬಿಡಬೇಕು. ಆಸ್ಪತ್ರೆಗೆ ಬರುವ ಎಲ್ಲರಿಗೂ ಆರೋಗ್ಯ ಸೇವೆ ಕಲ್ಪಿsಸಬೇಕು ಎಂದು ಹೇಳಿದರು.

ಕಳೆದ ಎರಡು-ಮೂರು ತಿಂಗಳಲ್ಲಿ ಶಿಶು ಮತ್ತು ತಾಯಿ ಪ್ರಕರಣ ಸಂಬಂಧಿಸಿದಂತೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿರುವ ಅಂಕಿ ಅಂಶಗಳ ಮಾಹಿತಿಯನ್ನು ದಾಖಲೆ ಸಹಿತ ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಶಿಶು ಮತ್ತು ತಾಯಿ ಮರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶಿಶು ಮತ್ತು ತಾಯಿ ಮರಣವನ್ನು ಸೊನ್ನೆಗೆ ತರಬೇಕು. ಯಾವದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೆ ಆರೋಗ್ಯ ಸೇವೆ ಒದಗಿಸಬೇಕು ಎಂದು ಸಲಹೆ ಮಾಡಿದರು.

ಆರ್.ಸಿ.ಎಚ್.ಅಧಿಕಾರಿ ಡಾ. ನಿಲೇಶ್, ಏಪ್ರಿಲ್, ಮೇ ತಿಂಗಳಲ್ಲಿ ಒಟ್ಟು 16 ಶಿಶು ಮರಣ ಹೊಂದಿವೆ. ಒಬ್ಬ ತಾಯಿ ಏಪ್ರಿಲ್ ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಸರ್ಜನ್ ಡಾ. ಅಬ್ದುಲ್ ಅಜೀಜ್, ಡಾ. ಆಶಾ, ಡಾ. ಯತಿರಾಜು, ಡಾ. ಸೋಮಶೇಖರ್ ಇತರರು ಶಿಶು ಮತ್ತು ತಾಯಿ ಮರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಮಂಜುನಾಥ್, ದಿವಾಕರ ಹಾಗೂ ಇತರರು ಇದ್ದರು.