ಕುಶಾಲನಗರ, ಜೂ. 13: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ನಿಗಮದ ಕಛೇರಿ ಆವರಣದಲ್ಲಿ ನಡೆಯಿತು.

ಮೈಸೂರಿನ ಅಧೀಕ್ಷಕ ಅಭಿಯಂತರ ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆರಳೆಣಿಕೆಯ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ವಿವರಿಸಿದರು.

ನೀರಾವರಿ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಂಬಂಧಪಟ್ಟ ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣ ಪತ್ರ ಪಡೆಯುವ ಕುರಿತು ಚರ್ಚೆ ನಡೆಯಿತು. ಸಾರ್ವಜನಿಕರ ಉಪಸ್ಥಿತಿಯ ಕೊರತೆ ಹಿನ್ನೆಲೆಯಲ್ಲಿ ಯಾವದೇ ರೀತಿಯ ಹೆಚ್ಚಿನ ಚರ್ಚೆ ನಡೆಯಲು ಸಾಧ್ಯವಾಗಿಲ್ಲ. ಸಭೆಯ ಬಗ್ಗೆ ಪ್ರಚಾರದ ಕೊರತೆ ಇದಕ್ಕೆ ಕಾರಣ ಎಂದು ಕೆಲವರು ಪತ್ರಿಕೆಯೊಂದಿಗೆ ದೂರಿದರು.

ಈ ಸಂದರ್ಭ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ್, ಮೈಸೂರು ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ತಾರಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಮತ್ತಿತರರು ಇದ್ದರು.