ಗೋಣಿಕೊಪ್ಪಲು, ಜೂ.14: ಬೆಂಗಳೂರು ವಿಧಾನ ಸಭಾ ಮುಂಗಾರು ಅಧಿವೇಶನದ 7ನೇ ದಿನವಾದ ಮಂಗಳವಾರ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕೊಡಗು ಜಿಲ್ಲೆಯ ಸಮಸ್ಯೆ ಕುರಿತಂತೆ ಸುಮಾರು 2 ಗಂಟೆ ಮಾತನಾಡಿದರು.ಪ್ರಮುಖವಾಗಿ ಕೊಡಗು ಜಿಲ್ಲೆಯ ಕಂದಾಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಉಂಟಾಗುತ್ತಿರುವ ತೊಂದರೆ, ಆನೆ ಮಾನವ ಸಂಘರ್ಷ, ಸೂಕ್ಷ್ಮ ಪರಿಸರ ತಾಣ, ನಾಗರಹೊಳೆ ಅಭಯಾರಣ್ಯದಲ್ಲಿ ನೂರಾರು ಕೆರೆ ದುರಸ್ತಿ ಅಗತ್ಯತೆ, ಆನೆ ಕಂದಕ ವೈಫಲ್ಯ, ಗಾಂಜಾ ಮಾರಾಟಗಾರರಿಗೆ ಪೆÇಲೀಸರ ಬೆಂಬಲ ಇವೇ ಮೊದಲಾದ ವಿಚಾರ ಸುದೀರ್ಘ ಚರ್ಚೆ ನಡೆಯಿತು. ಶಾಸಕ ಬೋಪಯ್ಯ ಅವರ ಪ್ರಶ್ನೆಗೆ ಗ್ರಹ ಸಚಿವ ಜಿ. ಪರಮೇಶ್ವರ್, ಅರಣ್ಯ ಸಚಿವ ರಮಾನಾಥ ರೈ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉತ್ತರಿಸಿದರಲ್ಲದೆ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವ ಎಂದು ಸಮಾಧಾನ ಪಡಿಸಿದ ಘಟನೆಯೂ ನಡೆಯಿತು.ಕೊಡಗು ಜಿಲ್ಲೆಯಲ್ಲಿ ಅಕ್ರಮ ಸಕ್ರಮದನ್ವಯ ನಮೂನೆ 50, 53 ರಲ್ಲಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಹಾಗೂ 94ಸಿ ಅನ್ವಯ ವಸತಿ ರಹಿತರ ಒಟ್ಟು 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿದ್ದು, ಅತಂತ್ರ ಸ್ಥಿತಿಯಲ್ಲಿರುವದಾಗಿ ಶಾಸಕ ಬೋಪಯ್ಯ ಕಂದಾಯ ಸಚಿವರ ಗಮನ ಸೆಳೆದರು. ಅರಣ್ಯ ಇಲಾಖೆಯ ಸುಪರ್ದಿಯಿಂದ ಕಂದಾಯ ಇಲಾಖೆ ಸಿ ಮತ್ತು ಡಿ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸೂಕ್ತ ತಿದ್ದುಪಡಿಗಳನ್ನು ಮಾಡಿ ಇಂಡೀಕರಣ ಮಾಡುವ ಅಗತ್ಯ ಇದೆ. ಜಿಲ್ಲೆಯಲ್ಲಿ ಸುಮಾರು 18 ಸಾವಿರ ಎಕರೆಗೂ ಅಧಿಕ ಕೃಷಿಗೆ ಯೋಗ್ಯವಲ್ಲದ ಖರಾಬು ಜಾಗ ಇದ್ದು,

(ಮೊದಲ ಪುಟದಿಂದ) ಎಲ್ಲವೂ ಅರಣ್ಯ ಇಲಾಖೆಯ ಹಿಡಿತದಲ್ಲಿದೆ. ಈ ಬಗ್ಗೆ ಕಂದಾಯ ಇಲಾಖಾಧಿಕಾರಿ ಗಳಲ್ಲಿ ಕೇಳಿದರೆ ಸಕ್ರಮಗೊಳಿಸಲು ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಕೇಳುತ್ತಿದ್ದಾರೆ. ಸಿ ಮತ್ತು ಡಿ ವರ್ಗೀಕೃತ ಭೂಮಿಯ ಬಗ್ಗೆ ಕಂದಾಯ ಇಲಾಖೆಗೆ ನಿಯಂತ್ರಣ ವಿರಬೇಕೇ ವಿನಃ ಎಲ್ಲದಕ್ಕೂ ಅರಣ್ಯ ಇಲಾಖೆಗೇ ದುಂಬಾಲು ಬೀಳುವ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಯಾವದೇ ಕೆಲಸ ಕಾರ್ಯಗಳಾಗದೆ ಶೋಷಣೆ ಯಾಗುತ್ತಿದೆ ಎಂದು ಬೋಪಯ್ಯ ಅವರು ಆರೋಪಿಸಿದರು.

ಇದೇ ಸಂದರ್ಭ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಈಗಾಗಲೇ ವಸತಿಹೀನರು ಹಾಗೂ ಬಗರ್ ಹುಕುಂ ಅನ್ವಯ ಅಕ್ರಮ ಸಕ್ರಮಗೊಳಿಸುವ ನಿಟ್ಟಿನಲ್ಲಿ ಎಲ್ಲ್ಲಾ ಜಿಲ್ಲಾಧಿಕಾರಿಗಳಿಗೂ ಆದೇಶ ನೀಡಲಾಗಿದೆ. ಕಂದಾಯ ಇಲಾಖೆಯ ಯಾವದೇ ಅಧಿಕಾರಿ ಜವಾಬ್ದಾರಿ ಯಿಂದ ನುಣುಚಿಕೊಳ್ಳು ವಂತಿಲ್ಲ. ನಮೂನೆ 50,53 ಹಾಗೂ 94 ಸಿ ಅನ್ವಯ ಅಕ್ರಮ ಸಕ್ರಮಕ್ಕೆ ಅರ್ಜಿ ಹಾಕಿಕೊಂಡಿರುವವರಿಗೆ ನಿಯಮಾನು ಸಾರ ಹಕ್ಕುಪತ್ರವನ್ನು ನೀಡಲು ಸೂಚನೆ ನೀಡಲಾಗಿದೆ. ಇಲ್ಲವೇ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವದು ಎಂದು ಭರವಸೆ ನೀಡಿದರು.

ಭಾಗಮಂಡಲದಲ್ಲಿ ಎಸ್‍ಸಿ ಎಸ್‍ಟಿಗೆ ಮೀಸಲಾದ ಜಾಗವನ್ನು ಲ್ಯಾಂಡ್ ಬ್ಯಾಂಕ್‍ಗೆ ವರ್ಗಾವಣೆ ಮಾಡಿ 2007 ರಲ್ಲಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇವರಿಗೆ ಅಧಿಕಾರ ನೀಡಿದವರು ಯಾರು? ಸುಮಾರು 744 ಎಕರೆ ಜಮೀನನ್ನು ಕೇವಲ ಭಾಗಮಂಡಲದಲ್ಲಿಯೇ ಹಸ್ತಾಂತರಿಸಲಾಗಿದೆ. ಇನ್ನು ಉಳಿದೆಡೆಯ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವರು, ಅರಣ್ಯ ಇಲಾಖೆ ಸಿ ಮತ್ತು ಡಿ ವರ್ಗೀಕರಣಗೊಂಡ ಜಮೀನಿನಲ್ಲಿ ನೆಡುತೋಪು, ಇತ್ಯಾದಿ ಅರಣ್ಯೀಕರಣ ಕೈಗೊಂಡಿದ್ದರೆ ಅದನ್ನು ಅರಣ್ಯ ಇಲಾಖೆಗೆ ಬಿಡಲಾಗುವದು. ಆನೆ ಕಾರಿಡಾರ್ ಇತ್ಯಾದಿಗಳಿಗೆ, ವನ್ಯಪ್ರಾಣಿ ಗಳ ಮೇವಿಗೆ ಯಾವದೇ ಜನವಸತಿ ಇಲ್ಲದ ಜಾಗವನ್ನು ಹಸ್ತಾಂತರಿಸಿ, ಉಳಿಕೆ ಜಮೀನನ್ನು ಕಂದಾಯ ಇಲಾಖೆಯ ವಶಕ್ಕೆ ತೆಗೆದುಕೊಳ್ಳ ಲಾಗುವದು ಎಂದು ಹೇಳಿದರು. 94 ಸಿ ಅನ್ವಯ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳನ್ನು ಯಾವದೇ ಕಾರಣಕ್ಕೆ ಕೈಬಿಡುವಂತಿಲ್ಲ ಎಂದು ಇದೇ ಸಂದರ್ಭ ಭರವಸೆ ನೀಡಿದ್ದು, ಹಾಗೇನಾದರೂ ವಸತಿಹೀನರಿಗೆ ಅಡ್ಡಿಪಡಿಸುವ ಇಲಾಖಾಧಿಕಾರಿ ಗಳಿದ್ದಲ್ಲಿ ತನ್ನ ಗಮನಕ್ಕೆ ತರುವಂತೆ ಹೇಳಿದರು.

ಕೊಡಗು ಜಿಲ್ಲೆಗೆ ಆನೆ ಮಾನವ ಸಂಘರ್ಷ ತಡೆಗೆ ಆನೆಕಂದಕ ಹಾಗೂ ರೈಲ್ವೆ ಹಳಿಯ ತಡೆಗೋಡೆ ಅಳವಡಿಸಲು ಒಟ್ಟು ರೂ.284 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಆದರೆ, ಕೇವಲ ರೂ.6 ಕೋಟಿ ಬಿಡುಗಡೆ ಮಾಡಿ ಏನು ಪ್ರಯೋಜನ. ಆನೆಕಂದಕಗಳು ಕಳಪೆ ಗುಣಮಟ್ಟ ದ್ದಾಗಿದ್ದು ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಕಂದಕಗಳಿಗೆ ಅಡ್ಡಲಾಗಿರುವ ಕಲ್ಲು ಬಂಡೆಯನ್ನು ಸ್ಪೋಟಿಸುವ ಕಾರ್ಯ ಹಾಗೂ ಹರಿಯುತ್ತಿರುವ ತೋಡನ್ನು ದಾಟಿ ಆನೆಗಳು ನುಸುಳದಂತೆ ವೈಜ್ಞಾನಿಕ ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ವಾಗಬೇಕಾಗಿದೆ.

ಕೊಡಗು ಜಿಲ್ಲೆಯಲ್ಲಿ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ನಾಗರಹೊಳೆ ವನ್ಯಧಾಮಗಳಿದ್ದು, ಕಾಡುಪ್ರಾಣಿಗಳು ದಿನನಿತ್ಯ ಆಹಾರ ಹಾಗೂ ನೀರನ್ನು ಅರಸುತ್ತಾ ನಾಡಿಗೆ ಬರುತ್ತಿವೆ. ನೂರಾರು ಕಾಡಾನೆಗಳು ಕಾಫಿ ತೋಟದಲ್ಲಿಯೇ ವಾಸ್ತವ್ಯ ಹೂಡಿವೆ. ನಾಗರಹೊಳೆ ಅಭಯಾರಣ್ಯದ ನಡುವೆ ನೂರಾರು ಕೆರೆಗಳಿದ್ದು, ಅದರ ಹೂಳೆತ್ತುವ ಕಾರ್ಯ ನಡೆಯುತ್ತಿಲ್ಲ. ಕಾಡಿನಲ್ಲಿ ಪ್ರಾಣಿಗಳಿಗೆ ಮೇವೂ ಸಿಗುತ್ತಿಲ್ಲ. ವರ್ಷಂಪ್ರತಿ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಹಚ್ಚುವ ಕೆಲಸವು ನಡೆಯುತ್ತಿದೆ. ಇದರ ಹಿಂದೆ ಪರಿಸರ ವಾದಿಗಳ ಕೈವಾಡ ಇದೆ. ಈವರೆಗೂ ಬೆಂಕಿ ಪ್ರಕರಣದಲ್ಲಿ ಅಮಾಯಕ ಗಿರಿಜನರನ್ನು ಹೊರತುಪಡಿಸಿದರೆ ಪ್ರಮುಖ ಆರೋಪಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಸಿಓಡಿ ತನಿಖೆ ಏನಾಯಿತು? ಎಂದು ಬೋಪಯ್ಯ ಪ್ರಶ್ನಿಸಿದರು.

ಆನೆ ಮಾನವ ಸಂಘರ್ಷ ಮಿತಿಮೀರುತ್ತಿದ್ದು ಕೇವಲ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವದು ಮಾತ್ರ ಅರಣ್ಯ ಇಲಾಖೆ ಮಾಡುತ್ತಿದೆ. ಶಾಶ್ವತ ಪರಿಹಾರ ಏನು. ರಾಜ್ಯದಲ್ಲಿ ಹುಲಿಗಳ ಸಂಖ್ಯೆ 407ಕ್ಕೇರಿದೆ, ಆನೆಗಳ ಸಂಖ್ಯೆ 6072 ಇದೆ. ಭಾರತದಲ್ಲಿ ವನ್ಯಪ್ರಾಣಿ ಸಂರಕ್ಷಣೆಯಲ್ಲಿ ನಮ್ಮದು ಪ್ರಥಮ ಸ್ಥಾನ ಎಂದು ಪ್ರಚಾರ ಗಿಟ್ಟಿಸುತ್ತೀರಾ. ಮನುಷ್ಯ ಸತ್ತಿದ್ದಕ್ಕೆ ಬೆಲೆ ಇಲ್ಲವೇ? ಆನೆಗಳನ್ನು ಗುಂಡಿಟ್ಟು ಕೊಲ್ಲಲು ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿ. ಅದಕ್ಕೆ ಅವಕಾಶ ಇದೆ ಎಂದು ಉದ್ವೇಗದಿಂದ ಹೇಳಿದಾಗ ಪ್ರತಿಕ್ರಿಯೆ ನೀಡಿದ ಅರಣ್ಯ ಸಚಿವ ರಮಾನಾಥ ರೈ ಅವರು, ವನ್ಯಪ್ರಾಣಿ ಸಂರಕ್ಷಣೆಗೆ ಅರಣ್ಯ ಇಲಾಖೆ ಇದೆ. ಅವುಗಳನ್ನು ಕೊಲ್ಲುವ ಹಕ್ಕು ನಮಗಿಲ್ಲ. ಸುಬ್ರಮಣ್ಯ, ಕಡಮಕಲ್ ರಸ್ತೆ ಮಾಡಲು ಕಾನೂನು ಕೈಗೆ ತೆಗೆದುಕೊಂಡ ನಂತರ ಏನಾಯಿತು ನಿಮಗೆ ಗೊತ್ತಲ್ಲ ಎಂದು ಕುಟುಕಿದರು.

ನಾವು ಕೇವಲ ವನ್ಯಜೀವಿ ಪರವಲ್ಲ. ಜನಪರವಾಗಿಯೂ ಇದ್ದೇವೆ. ಆನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ, ಭಾಗಶಃ ಅಂಗಊನ ಗೊಂಡವರಿಗೆ ರೂ.2.50 ಲಕ್ಷ ದವರೆಗೂ ಪರಿಹಾರ ನೀಡಲಾಗುತ್ತಿದೆ. ಆನೆ ಕಾರಿಡಾರ್ ಅಗತ್ಯ ಆಗಬೇಕಾಗಿದೆ. ಆನೆಯ ಚಲನವಲನ ನಿಯಂತ್ರಣ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವು ನೀವು ಮಾತೂಕತೆ ಮೂಲಕ ಪರಿಹಾರೋಪಾಯ ಹುಡುಕುವ. ಮರಗಿಡ. ವನ್ಯಪ್ರಾಣಿಗಳು ಇರಲಿ, ನಾವೂ ಬದುಕುವ ಎಂದು ಉತ್ತರಿಸಿದರು.

ಇದೇ ಸಂದರ್ಭ ಎದ್ದು ನಿಂತ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಈ ಹಿಂದೆ ಹುಲ್ಲಿನ ಮನೆಗಳೇ ಅಧಿಕವಿದ್ದಾಗ ಗುಬ್ಬಚ್ಚಿಗಳ ಸಂಖ್ಯೆ ಅಧಿಕವಿತ್ತು. ಇದೀಗ ಕಾಂಕ್ರೀಟ್ ಕಟ್ಟಡವಾಗುತ್ತಿದ್ದಂತೆ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಕಾಡನ್ನೆಲ್ಲಾ ವಸತಿ ಮಾಡುವದು ನಿಮ್ಮ ಯೋಚನೆಯೇ ಎಂದು ಗುಬ್ಬಚ್ಚಿ ಪಾಠ ಹೇಳಿದ ಘಟನೆಯೂ ನಡೆಯಿತು.

ರಾಹುಲ್‍ಗಾಂಧಿ ಬೆಂಗಳೂರಿಗೆ ಬಂದಿದ್ದ ಸಂದರ್ಭ ನಾವೂ ಹಿಂದೂಗಳೇ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಬೋಪಯ್ಯ ಅವರು ಈಗಲಾದರೂ ಹಿಂದೂಗಳೆಂದು ಜ್ಞಾನೋದಯವಾಗಿದ್ದಕ್ಕೆ ಅಭಿನಂದಿಸುತ್ತೇನೆ ಎಂದು ಹೇಳಿದಾಗ ಅರಣ್ಯ ಸಚಿವ ರಮಾನಾಥ ರೈ ಸಿಡಿಮಿಡಿಗೊಂಡು ಸನಾತನ ಧರ್ಮವನ್ನು ನಾವೂ ಪಾಲನೆ ಮಾಡುತ್ತಾ ಬಂದಿದ್ದೇವೆ. ನಿಮ್ಮಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ. ನೀವು ಹಿಂದೂ ಹೆಸರಿನಲ್ಲಿ ಚೇಷ್ಟೆ ಮಾಡುತ್ತೀರಿ. ಅಪಾಯಕಾರಿ ಮಾತುಗಳನ್ನು ಅಧಿಕ ಬಳಕೆ ಮಾಡುತ್ತೀರಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ವನ್ಯ ಜೀವಿ ಮಂಡಳಿಗೆ ಕವಡೆ ಕಾಸಿನ ಬೆಲೆ ಇಲ್ಲ. ಕೇಂದ್ರ ವನ್ಯಜೀವಿ ಮಂಡಳಿಯ ನಿರ್ಣಯಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕಸ್ತೂರಿ ರಂಗನ್ ವರದಿಗೆ ಯಾಕೆ ವಿರೋಧಿಸುತ್ತಿಲ್ಲ ಎಂಬ ಪ್ರಶ್ನೆಗೆ ಕಸ್ತೂರಿ ರಂಗನ್ ವರದಿಗೆ ನಾನೂ ವಿರೋಧಿಸುತ್ತೇನೆ. ನಮ್ಮ ರಾಜ್ಯಕ್ಕೆ ಕಸ್ತೂರಿರಂಗನ್ ವರದಿ ಅನುಷ್ಠಾನ ಬೇಡ. ಈ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸುವ ಎಂದು ಅರಣ್ಯ ಸಚಿವರು ಉತ್ತರಿಸಿದರು.

ಕೊಡಗು ಜಿಲ್ಲೆಯಲ್ಲಿ ಮುಜ ರಾಯಿ ಇಲಾಖೆಯ ವಶ ದಲ್ಲಿಲ್ಲದ ದೇವಸ್ಥಾನಗಳ ನೋಂದಾವಣೆ ಕಡ್ಡಾಯ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದನ್ನು ಹಿಂಪಡೆಯಬೇಕು. ಕೊಡಗು ಜಿಲ್ಲೆಯ ಪ್ರತೀ ಗ್ರಾಮದಲ್ಲಿಯೂ ವಿವಿಧ ದೇವಸ್ಥಾನಗಳು ಉತ್ತಮವಾಗಿ ಧಾರ್ಮಿಕ ಕಾರ್ಯ ನಡೆಸುತ್ತಿವೆ. ಅವುಗಳಿಗೆ ಸರ್ಕಾರದ ಯಾವದೇ ನಿರ್ಬಂಧ ಬೇಡ ಎಂದು ಬೋಪಯ್ಯ ಒತ್ತಾಯಿಸಿದರು. ಅರ್ಜಿ ನಮೂನೆ 53ರಲ್ಲಿ ದೇವಸ್ಥಾನಗಳನ್ನು ಗುರುತಿಸಿ ಸ್ವಾಯತ್ತತೆಯನ್ನು ನೀಡಲು ಅರಣ್ಯ ಸಚಿವರಿಗೆ ಅಧಿಕಾರವಿದೆ ಎಂದು ಬೋಪಯ್ಯ ವಿವರಿಸಿದರು.

1985 ರ ನಂತರ ದೇವರಕಾಡು ಗಳಲ್ಲಿ ಯಾವದೇ ಮರಕಡಿಯದಂತೆ ನಿರ್ಬಂಧಿ¸ Àಲಾಗಿದ್ದು, ಅದರಂತೆಯೇ ಕೊಡವ ಸಾಂಪ್ರದಾಯಿಕ ಕೈಲ್ ಮುಹೂರ್ತ ಹಾಗೂ ಹುತ್ತರಿ ಹಬ್ಬದಲ್ಲಿ ಬೇಟೆಗೆ ಅವಕಾಶ ಇದೆ. ತೋಟಕ್ಕೆ ಬರುವ ಕಾಡುಹಂದಿಗಳನ್ನು ಬೇಟೆಯಾಡಬಹುದು. ಆದರೆ, ತಿನ್ನುವಂತಿಲ್ಲ. ಹೂಳಬೇಕು ಎಂಬದು ಯಾವ ನ್ಯಾಯ, ಗೋಮಾಂಸ ತಿನ್ನಲು ರಿಯಾಯಿತಿ ಏಕೆ? ಎಂದು ಬೋಪಯ್ಯ ಪ್ರಶ್ನಿಸಿದರು.

ಈ ಮಾತಿಗೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈ, ನಮ್ಮ ಅರಣ್ಯ ಇಲಾಖೆಗೆ ವನ್ಯಪ್ರಾಣಿ ಸಂರಕ್ಷಣೆಯ ಹೊಣೆಗಾರಿಕೆ ಇದೆ. ಇದನ್ನು ಮೀರುವಂತಿಲ್ಲ. ನಾವು ಮನುಕುಲದ ದ್ವೇಷಿ ಅಲ್ಲ. ಆನೆ ಮಾನವ ಸಂಘರ್ಷ ಹತ್ತಿಕ್ಕಲು ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಉತ್ತರಿಸಿದರು.

ಸುಬ್ರಮಣ್ಯ ಕಡಮಕಲ್ ಸಮೀಪದ ಹಾದಿಗೆ ಅರಣ್ಯ ಇಲಾಖೆಗೆ ಕೇವಲ 6 ಎಕರೆ ರಸ್ತೆ ಅಭಿವೃದ್ಧಿಗೆ 48 ಎಕರೆ ಅರಣ್ಯೀಕರಣಕ್ಕೆ ಜಾಗ ನೀಡಲಾಗಿದೆ. ಮಡಿಕೇರಿ-ಸುಬ್ರಮಣ್ಯ ರಸ್ತೆ ಅಭಿವೃದ್ಧಿಗೆ ಯಾಕೆ ಅಡ್ಡಿ ಪಡಿಸುತ್ತಿದ್ದೀರಾ. ಸುಳ್ಯ ನಿಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುತ್ತದೆ. ಸುಳ್ಯದ ಜನತೆಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಿದ್ದಲ್ಲಿ ಲೋಕೋಪಯೋಗಿ ರಸ್ತೆಗೆ ಅವಕಾಶವಿದೆ ಎಂದು ಬೋಪಯ್ಯ ರಮಾನಾಥ ರೈ ಅವರಲ್ಲಿ ಬೆಂಬಲ ನೀಡಲು ಮನವಿ ಮಾಡಿದರು. ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ನೀಲಗಿರಿ ಹಾಗೂ ಮಾಂಜಿಯಂ ನೆಡುತೋಪು ಬಗ್ಗೆಯೂ ಶಾಸಕದ್ವಯರು ಇದೇ ಸಂದರ್ಭ ಅರಣ್ಯ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಈಗಿನ ವಸ್ತುಸ್ಥಿತಿಯಲ್ಲಿ ಮನುಷ್ಯನನ್ನು ರಕ್ಷಿಸಿಕೊಳ್ಳುವದು ಹೇಗೆ? ಮರ ಕಡಿಯುವದು ಬೇಡ. ಬೇಕಿದ್ದರೆ ರೆಂಬೆ ಕಡಿಸುವ. ನೈಸರ್ಗಿಕ ಸಂಪತ್ತನ್ನು ಹಾಗೇ ಉಳಿಸಿಕೊಳ್ಳೋಣ. ಸಮಸ್ಯೆಗೆ ಚರ್ಚಿಸಿ ಉತ್ತರ ಹುಡುಕೋಣ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರ ಪ್ರಶ್ನೆಗೆ ಉತ್ತರಿಸಿ ಸಮಾಧಾನಪಡಿಸಿದರು.

ಅಭಯಾರಣ್ಯದಲ್ಲಿ ವಾಸಿ ಸುತ್ತಿರುವ ಆದಿವಾಸಿಗಳು ಹಾಗೂ ಇತರೆ ಜನರ ಗಣತಿಗೆ ಡಿಸಿಎಫ್, ಪಿಸಿಸಿಎಫ್ ಅಧಿಕಾರಿಗಳಿಗೆ ಆದೇಶ ನೀಡುವಂತೆಯೂ, ಹಕ್ಕುಪತ್ರ ವಂಚಿತರಿಗೆ ಕೂಡಲೇ ಹಕ್ಕುಪತ್ರ ನೀಡಲು ಕ್ರಮ, ಕೊಡಗಿನಲ್ಲಿ ಜನಪರ ಕೆಲಸ ಮಾಡುವ ಅಧಿಕಾರಿಗೆ ಅವಕಾಶ ಕೊಡಿ. ಇತರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಾಸಕರು ಇದೇ ಸಂದರ್ಭ ಮನವಿ ಮಾಡಿದರು.