ಮಡಿಕೇರಿ, ಜೂ. 14: ತಾಲೂಕು ಒಕ್ಕಲಿಗರ ಸಂಘದ ಸಭೆ ಕಳೆದ ತಾ. 11 ರಂದು ಮಡಿಕೇರಿಯ ಕಾಲೇಜು ರಸ್ತೆಯ ರಾಜ್ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಂ.ಪಿ. ಕೃಷ್ಣರಾಜು ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಚರ್ಚೆ ನಡೆದು ಅರೆಭಾಷಿಕ ಫೆಡರೇಷನ್‍ಗೆ ಒಕ್ಕಲಿಗರನ್ನು ಸೇರ್ಪಡೆಗೊಳಿಸಲು ಸಭೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿತು ಮತ್ತು ಒಕ್ಕಲಿಗ ಜನಾಂಗ ದವರ ಹಿತವನ್ನು ಕಾಪಾಡುವಲ್ಲಿ ಮತ್ತು ಸಂಘಟನೆಯನ್ನು ಪ್ರಬಲಗೊಳಿಸುವಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಅರೆಭಾಷಿಕ ಗೌಡ ಜನಾಂಗದ ಸಂಸ್ಕøತಿ ಆಚಾರ - ವಿಚಾರ ಬೇರೆ ಬೇರೆ ಆಗಿದ್ದು, ಒಕ್ಕಲಿಗರ ಆಚಾರ - ವಿಚಾರ ಬೇರೆ ಆಗಿರುವದರಿಂದ ಬೆಂಬಲಿಸುವ ಪ್ರಮೇಯವೇ ಇಲ್ಲ ಎಂದು ಸಭೆ ತಿಳಿಸಿತು. ಈ ಬಗ್ಗೆ ಜಿಲ್ಲಾ ಸಮಿತಿಯೊಂದಿಗೆ ಚರ್ಚಿಸಲು ತೀರ್ಮಾನಿಸಲಾಯಿತು.

ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಪ್ರತಿ ವರ್ಷ ಸರಕಾರ ದಿಂದ ಆಚರಿಸಲು ತೀರ್ಮಾನಿಸಿರು ವದನ್ನು ಸಭೆ ಸ್ವಾಗತಿಸಿತು. ಸರಕಾರದಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ಸಂದರ್ಭ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ 3 ತಾಲೂಕಿನ ಒಕ್ಕಲಿಗರ ಸಂಘವನ್ನು ಗಣನೆಗೆ ತೆಗೆದುಕೊಳ್ಳುವಂತೆ ಕೋರಲು ತೀರ್ಮಾನಿಸಲಾಯಿತು.

ಮಡಿಕೇರಿ ಸುದರ್ಶನ ಅತಿಥಿಗೃಹದ ಬಳಿ ಪೈಸಾರಿ ಜಾಗವಿದ್ದು, ಈ ಜಾಗದಲ್ಲಿ 10 ಸೆಂಟು ನಿವೇಶನ ಕೋರಿ ಸಂಘದಿಂದ ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸುವದರ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸಲು ತೀರ್ಮಾನಿಸಲಾಯಿತು. ಜಿಲ್ಲೆಯಲ್ಲಿರುವ ಒಕ್ಕಲಿಗ ಜನಾಂಗದ ಅಸ್ಥಿತ್ವವನ್ನು ಉಳಿಸಿಕೊಳ್ಳುವಲ್ಲಿ ಹಾಗೂ ಸಂಘಟನೆ ಕುರಿತಂತೆ ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿಯನ್ನು ಭೇಟಿ ಮಾಡಲು ಸಭೆ ನಿರ್ಧರಿಸಿತು.

ಜಿಲ್ಲಾ ಒಕ್ಕಲಿಗರ ಸಂಘದಿಂದ ನಡೆಯುವ ಕ್ರೀಡಾಕೂಟವನ್ನು ತಾಲೂಕು ಸಮಿತಿಯಿಂದ ಭಾಗವಹಿಸಲು ತೀರ್ಮಾನಿಸಲಾ ಯಿತು. ಸಭೆಯ ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಎ. ಮಂಜುನಾಥ್ ಸ್ವಾಗಿತಿಸಿದರು. ಈ ಸಭೆಯಲ್ಲಿ ಕಾರ್ಯಾಧ್ಯಕ್ಷ ವಿ.ಪಿ. ಸುರೇಶ್, ಖಜಾಂಚಿ ಕೆ. ರಮೇಶ್, ಗೌರವ ಅಧ್ಯಕ್ಷ ಎಂ.ಪಿ. ರಾಮರಾಜು, ಉಪಾಧ್ಯಕ್ಷ ವಿಜಯಕುಮಾರ್, ಸಮಿತಿ ಪದಾಧಿಕಾರಿಗಳಾದ ಲಲಿತ, ವಿ.ಎಸ್. ಮನುಕುಮಾರ್, ಪಿ. ಉಮೇಶ್, ಕುಶಾಲಪ್ಪ, ಧರ್ಮೇಂದ್ರ, ಪಾಲೂರು ದಿನೇಶ್ ಭಾಗವಹಿಸಿದ್ದರು.