ಕೂಡಿಗೆ, ಜೂ. 14: ಒಂದು ವರ್ಷದ ಪುಟ್ಟ ಬಾಲೆ ಆಟವಾಡುವಾಗ ಬರೋಬ್ಬರಿ 10 ಮಣಿಗಳನ್ನು ತನ್ನ ಮೂಗಿನ ಒಳಗೆ ಹಾಕಿಕೊಂಡು 5 ಮಣಿಗಳು ಶ್ವಾಸನಾಳ ಸೇರಿ ಅಪಾಯದಲ್ಲಿ ಸಿಲುಕಿದ ಘಟನೆಯೊಂದು ನಡೆದಿದೆ. ಕುಶಾಲನಗರ ಸಮೀಪದ ಬೈಚನಹಳ್ಳಿಯ ನಿವಾಸಿ ಅಬ್ದುಲ್ ರಶೀದ್ ಅವರ ಒಂದೂವರೆ ವರ್ಷದ ಮಗಳು ರಿಫಾನ್ ಆಟವಾಡುವಾಗ ತಾನು ಧರಿಸಿದ್ದ ಬಟ್ಟೆಯಲ್ಲಿದ್ದ ಮಣಿಗಳನ್ನು ಕಿತ್ತು 10 ಮಣಿಗಳನ್ನು ತನ್ನ ಮೂಗಿನೊಳಗೆ ಹಾಕಿಕೊಂಡಿದ್ದಾಳೆ. ಇದನ್ನು ಕಂಡ ಪೋಷಕರು ಹತ್ತು ಮಣಿಗಳಲ್ಲಿ 5 ಮಣಿಗಳನ್ನು ಹೊರ ತೆಗೆದಿದ್ದಾರೆ. ಇನ್ನುಳಿದ ಮಣಿಗಳು ಶ್ವಾಸನಾಳದೊಳಗೆ ಸೇರಿಕೊಂಡಿವೆ. ಇದರಿಂದ ಮೂಗು ನೋವು ಕಾಣಿಸಿಕೊಂಡಿದ್ದು, ಉಸಿರಾಟಕ್ಕೆ ತೊಂದರೆಯಾದ್ದರಿಂದ ಮಡಿಕೇರಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ವೈದ್ಯರನ್ನು ಸಂಪರ್ಕಿಸಿ ನಡೆದ ವಿಷಯವನ್ನು ವಿವರಿಸಿದ್ದಾರೆ. ಬಳಿಕ ಡಾ.ದೀಪಕ್ ಶಸ್ತ್ರಚಿಕಿತ್ಸೆ ನಡೆಸಿ ಶ್ವಾಸನಾಳ ಸೇರಿದ್ದ ಐದು ಮಣಿಗಳನ್ನು ಹೊರತೆಗೆದರು.