ಕುಶಾಲನಗರ, ಜೂ. 14: ರಾಜ್ಯದ ಮೂರು ಜಿಲ್ಲೆಗಳ ಕೃಷಿ ಚಟುವಟಿಕೆಗಳಿಗೆ ನೀರು ಒದಗಿಸಲು ನಿರ್ಮಾಣವಾದ ಜಿಲ್ಲೆಯ ಹಾರಂಗಿ ಅಣೆಕಟ್ಟು ಇತ್ತೀಚಿನ ದಿನಗಳಲ್ಲಿ ಭದ್ರತೆಯ ಕೊರತೆಯನ್ನು ಎದುರಿಸುತ್ತಿದೆ. ಒಂದೆಡೆ ಅಣೆಕಟ್ಟು ಹಿನ್ನೀರಿನ ಜಾಗದಲ್ಲಿ ಅಕ್ರಮ ರೆಸಾರ್ಟ್‍ಗಳು ತಲೆ ಎತ್ತಿದ್ದು ಎಗ್ಗಿಲ್ಲದೆ ಹಲವು ಚಟುವಟಿಕೆ ನಡೆಯುತ್ತಿದ್ದು ಇನ್ನೊಂದೆಡೆ ಜಲಾಶಯದ ಎದುರು ಭಾಗದಲ್ಲಿ ಅಕ್ರಮ ಕಟ್ಟಡಗಳು ರಾಜಾರೋಷವಾಗಿ ನಿರ್ಮಾಣ ಗೊಂಡಿದೆ. ಈ ಮೂಲಕ ನದಿ ನೀರು ನೇರವಾಗಿ ಕಲುಷಿತಗೊಳ್ಳುವ ದರೊಂದಿಗೆ ಅಣೆಕಟ್ಟೆಯ ರಕ್ಷಣಾ ವ್ಯವಸ್ಥೆ ಕೂಡ ಸಂಪೂರ್ಣ ಕುಸಿದಿದೆ ಎನ್ನಬಹುದು.

ನಿರ್ಬಂಧಿತ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇಂತಹ ಅಕ್ರಮ ಕಟ್ಟಡಗಳ ತೆರವುಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕುಶಾಲನಗರ ಸಮೀಪದ ಹಾರಂಗಿ ಹುಲುಗುಂದ ವ್ಯಾಪ್ತಿಯಲ್ಲಿ ಕಳೆದ 4 ದಶಕಗಳ ಹಿಂದೆ ಹಾರಂಗಿ ಜಲಾಶಯ ನಿರ್ಮಾಣಗೊಂಡಿದ್ದು ಈ ಯೋಜನೆಯಿಂದ ಸಾವಿರಾರು ಜನರು ನಿರ್ಗತಿಕರಾಗಿದ್ದು ಇನ್ನೂ ಪುನರ್ವಸತಿ ಕೇಂದ್ರಗಳಲ್ಲಿ ಕಲ್ಪಿಸಬೇಕಾದ ಮೂಲಭೂತ ವ್ಯವಸ್ಥೆಗಳು ಲಭ್ಯವಾಗಿಲ್ಲ ಎನ್ನುವ ಕೂಗು ಹಸಿರಾಗಿಯೇ ಇದೆ. ಜಲಾಶಯದ ಮುಂಭಾಗದ ಅಂದಾಜು 275 ಎಕರೆ ಪ್ರದೇಶದಲ್ಲಿ ಸ್ವಲ್ಪ ಭಾಗ ತೋಟಗಾರಿಕೆ, ಮೀನುಗಾರಿಕೆ ಇಲಾಖೆಗಳಿಗೆ ಪರಭಾರೆಯಾಗಿದ್ದು ಇನ್ನುಳಿದಂತೆ ಸುಮಾರು 133 ಎಕರೆ ಪ್ರದೇಶಗಳಲ್ಲಿ 325 ಕ್ಕೂ ಅಧಿಕ ಮನೆಗಳು ಅಕ್ರಮವಾಗಿ ನಿರ್ಮಾಣಗೊಂಡಿದೆ ಎನ್ನುತ್ತಾರೆ ಹಾರಂಗಿ ಅಣೆಕಟ್ಟು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಧರ್ಮರಾಜ್.

ಇದರೊಂದಿಗೆ ಅಣೆಕಟ್ಟೆಯ ಮುಂಭಾಗದಲ್ಲಿ ಕೆಲವು ಧಾರ್ಮಿಕ ಕೇಂದ್ರಗಳು ಕೂಡ ತಲೆ ಎತ್ತಿದ್ದು ಈ ಬಗ್ಗೆ ತೆರವುಗೊಳಿಸಲು ಹಲವು ಬಾರಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಂದಾಜು 1800 ರಿಂದ 2000 ಜನಸಂಖ್ಯೆಯುಳ್ಳ ಈ ವ್ಯಾಪ್ತಿಯಲ್ಲಿ ನಾಗರಿಕರಿಗೆ ಮತದಾನದ ಹಕ್ಕು ಹೊಂದಿರುವ ನಿವಾಸಿಗಳಿಗೆ ನೀರು, ವಿದ್ಯುತ್ ಸೇರಿದಂತೆ ಕೆಲವು ಮೂಲಭೂತ ಸೌಕರ್ಯಗಳನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಒದಗಿಸುತ್ತಿದೆ. ಇದಕ್ಕೆ ಹಾರಂಗಿ ಯೋಜನೆಯ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ.

4 ದಶಕಗಳ ಹಿಂದೆ ಅಣೆಕಟ್ಟು ಕೆಲಸ ನಿರ್ವಹಣೆಗೆಂದು ಬಂದ ಕಾರ್ಮಿಕರು ಇಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದು ಇದೀಗ ಶಾಶ್ವತವಾಗಿ ನೆಲೆಕಂಡಿದ್ದಾರೆ ಎನ್ನುವ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೂಡುಮಂಗಳೂರು ಗ್ರಾಮಪಂಚಾಯಿತಿಗೆ ಹಲವು ಪತ್ರಗಳನ್ನು ಬರೆದಿದ್ದು ಹಾರಂಗಿ ಯೋಜನೆಯ ನಿರ್ಬಂಧಿತ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಯಾವದೇ ರೀತಿಯ ನಿರಾಕ್ಷೇಪಣಾ ಪತ್ರ ನೀಡದಂತೆ ಸೂಚನೆ ನೀಡಿದ್ದಾರೆ. ಯಾವದೇ ಕಟ್ಟಡ ನಿರ್ಮಾಣಕ್ಕೆ ಅಥವಾ ಅಭಿವೃದ್ಧಿ ಕಾಮಗಾರಿಗೆ ಆಸ್ಪದ ಕಲ್ಪಿಸಬಾರದೆಂದು ಲಿಖಿತವಾಗಿ ಆದೇಶ ನೀಡಿದೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಈ ಸಂಬಂಧ ಹಲವು ಪತ್ರಗಳನ್ನು ಬರೆದರೂ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ತಿಳಿಸಿರುವ ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು ಮೇಲಧಿಕಾರಿಗಳ ಮೂಲಕ ಸರಕಾರಕ್ಕೆ ಪತ್ರ ರವಾನಿಸಲಾಗಿದೆ. ನೆಲ ಬಾಡಿಗೆಯಲ್ಲಿ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಿಸಿಕೊಂಡ ಕೆಲವರು ಬಾಡಿಗೆ ಪಾವತಿಸುತ್ತಿಲ್ಲ. ಅಕ್ರಮವಾಗಿರುವ 333 ಮನೆ ಮತ್ತು ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುವದು ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ ಹಾರಂಗಿ ಜಲಾಶಯದ ಹಿನ್ನೀರಿನ 4200 ಎಕರೆ ವ್ಯಾಪ್ತಿಯಲ್ಲಿ 10 ಕ್ಕೂ ಅಧಿಕ ರೆಸಾರ್ಟ್‍ಗಳು ಅಕ್ರಮವಾಗಿ ತಲೆಎತ್ತಿದ್ದು ಇದರಿಂದ ಜಲಾಶಯದ ಭದ್ರತೆಗೆ ತೊಡಕುಂಟಾಗಿದೆ. ರೆಸಾರ್ಟ್‍ಗಳಿಂದ ಕಲುಷಿತ ನೀರು ನೇರವಾಗಿ ಜಲಾಶಯಕ್ಕೆ ಹರಿದುಬಂದು ಜಲಚರಗಳು ನಾಶವಾಗುವದರೊಂದಿಗೆ ನೀರು ಮಾಲಿನ್ಯಗೊಳ್ಳುತ್ತಿದೆ.

ಪ್ರವಾಸಿಗರು ನಿರ್ಬಂಧಿತ ಪ್ರದೇಶಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ರೆಸಾರ್ಟ್‍ಗಳನ್ನು ತೆರವುಗೊಳಿಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವದರೊಂದಿಗೆ ಅಣೆಕಟ್ಟೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೆಸಾರ್ಟ್‍ಗಳನ್ನು ತೆರವುಗೊಳಿಸಲು ಮುಂದಿನ ದಿನಗಳಲ್ಲಿ ಕಾರ್ಯಯೋಜನೆ ರೂಪಿಸುವ ಬಗ್ಗೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹಾರಂಗಿ ಹಿನ್ನೀರಿನಲ್ಲಿ ಜಲಾಶಯದ ಎದುರು ಭಾಗಕ್ಕೆ ದಿನನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗರು ಲಗ್ಗೆಯಿಡುತ್ತಿದ್ದು ರಾತ್ರಿ ವೇಳೆ ಕೂಡ ಅಕ್ರಮವಾಗಿ ನೆಲೆಸುತ್ತಿದ್ದಾರೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ಶಕ್ತಿಗೆ ತಿಳಿಸಿದ್ದಾರೆ.

ಅಣೆಕಟ್ಟು ಭದ್ರತೆ ಹಿನ್ನೆಲೆ ಸರಕಾರ ಸ್ಪಷ್ಟ ನಿಲುವು ತೆಗೆದುಕೊಂಡು ನಿಗಮದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದಲ್ಲಿ ಮಾತ್ರ ಮುಂದೆ ಉಂಟಾಗಲಿರುವ ಅನಾಹುತಕ್ಕೆ ಕಡಿವಾಣ ಹಾಕಲು ಸಾಧ್ಯ ಎನ್ನಬಹುದು.

- ಚಂದ್ರಮೋಹನ್