ಕೂಡಿಗೆ, ಜೂ. 14 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು-ಕಾಳೀದೇವನ ಹೊಸೂರು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಕುಡಿಯುವ ನೀರಿಗಾಗಿ ಪರದಾಡುವ ಪ್ರಸಂಗ ಎದುರಾಗಿದೆ. ಗ್ರಾಮಗಳ ಕೆಳಭಾಗದಲ್ಲಿ ಹಾರಂಗಿ ಮುಖ್ಯ ನಾಲೆಯು ಹರಿಯುತ್ತಿದೆ. ಕಳೆದ ಒಂದು ವಾರಗಳಿಂದ ಹಾರಂಗಿ ಅಣೆಕಟ್ಟೆಯಿಂದ ನಾಲೆಯಲ್ಲಿ ಸೋರಿಕೆ ನೀರು ಬಾರದೆ ಇದ್ದ ಕಾರಣ ನಾಲೆಯಲ್ಲಿ ನೀರೆ ಇಲ್ಲದಂತಾಗಿದೆ. ಇದರ ಜೊತೆಗೆ ಈ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಐದು ಬೋರ್‍ವೆಲ್ ಗಳನ್ನು ಕೊರೆಸಿದರೂ ನೀರು ಸಮರ್ಪಕವಾಗಿ ಬಾರದೆ, ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಬೋರ್‍ವೆಲ್ ನೀರು ಇಲ್ಲದೆ, ನಾಲೆಯಲ್ಲಿಯೂ ನೀರು ಹರಿಯದೆ ಈ ಭಾಗದ ಜನರು ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಮತ್ತು ಆ ವಾರ್ಡಿನ ಸದಸ್ಯ ರವಿ ಖುದ್ದಾಗಿ ಟ್ಯಾಂಕರ್ ಮೂಲಕ ನೀರನ್ನು ಒದಗಿಸಿದರು.

ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ನೀರು ಇರುವ ಜಾಗವನ್ನು ಗುರುತಿಸಿ ಬೋರ್‍ವೆಲ್ ಕೊರೆಸಿ ಹೈಟ್ಯಾಂಕ್ ನಿರ್ಮಿಸಿ ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಕೆ.ಕೆ.ನಾಗರಾಜ ಶೆಟ್ಟಿ