ಮಡಿಕೇರಿ, ಜೂ. 14: ಕರ್ನಾಟಕ ರಾಜ್ಯದಲ್ಲಿ ಸರಕಾರಿ ಶಾಲೆಗಳ 89 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಈ ಪೈಕಿ 87 ಕೊಠಡಿಗಳು ಪ್ರಾಥಮಿಕ ಹಾಗೂ 2 ಕೊಠಡಿಗಳು ಪ್ರೌಢಶಾಲೆಗೆ ಸಂಬಂಧಿಸಿವೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದರು.

ಸರಕಾರಿ ಶಾಲೆಗಳ ಶಿಥಿಲಗೊಂಡಿರುವ ಕೊಠಡಿಗಳಿಂದ ಮಕ್ಕಳನ್ನು ಸುಸಜ್ಜಿತ ಕಟ್ಟಡಗಳಿಗೆ ಸ್ಥಳಾಂತರಗೊಳಿಸಲು ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದು, ಕೊಡಗು ಜಿಲ್ಲೆಯಲ್ಲಿ 9 ಸರಕಾರಿ ಪ್ರಾಥಮಿಕ ಶಾಲೆಗಳ 22 ಕೊಠಡಿಗಳು ಅಪಾಯದಲ್ಲಿವೆ ಎಂಬದಾಗಿ ಸಚಿವರು ಮಾಹಿತಿ ನೀಡಿದರು.

ಕೊಡಗಿನ ಚೆರಿಯಪರಂಬು ಹಾಗೂ ಅಯ್ಯಂಗೇರಿ ಸರಕಾರಿ ಶಾಲೆಗಳ ತಲಾ 4 ಕೊಠಡಿಗಳು, ಮದಲಾಪುರ, ಆಲೂರು-ಸಿದ್ದಾಪುರ ಶಾಲೆಗಳಲ್ಲಿ ತಲಾ 3 ಕೊಠಡಿಗಳು ಅಪಾಯದಲ್ಲಿವೆ. ಇನ್ನು ಕೊತ್ತನಳ್ಳಿ, ಹುದೂರು, ಕುಂದದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಗಳ ತಲಾ 2 ಕೊಠಡಿಗಳು, ಕಡಗದಾಳು, ಹರಿಹರ ಪ್ರಾಥಮಿಕ ಶಾಲಾ ಕಟ್ಟಡಗಳ ಒಂದೊಂದು ಕೊಠಡಿಗಳನ್ನು ನೆಲಸಮಗೊಳಿಸಬೇಕಿದೆ ಎಂದು ಮೇಲ್ಮನೆ ಸದಸ್ಯ ಸುನಿಲ್ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಈ ಶಾಲೆಗಳಲ್ಲಿ ನೂತನ 22 ಕೊಠಡಿಗಳನ್ನು ನಿರ್ಮಿಸುವ ದಿಸೆಯಲ್ಲಿ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಂಡಿದ್ದು, ಹೊಸ ಕೊಠಡಿಗಳ ನಿರ್ಮಾಣಕ್ಕಾಗಿ ಒಟ್ಟು ರೂ. 1.37 ಕೋಟಿ ಮಂಜೂರಾತಿಗೆ ಗಮನಹರಿಸಿದ್ದಾಗಿ ತನ್ವೀರ್ ಸೇಠ್ ಅಂಕಿ ಅಂಶ ನೀಡಿದ್ದಾರೆ.