ಮಡಿಕೇರಿ, ಜೂ. 14: ಕೊಡಗು ಜಿಲ್ಲೆಯಲ್ಲಿ ಜಮ್ಮಾಬಾಣೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ವಿಧಿಸಲು ಇರುವ ಸಮಸ್ಯೆ ಮೇಲ್ಮನೆಯಲ್ಲಿ ಬಹಿರಂಗ ವಾಗಿದೆ. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಜಮ್ಮಾ ಬಾಣೆಗೆ ಕಂದಾಯ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಕಂದಾಯ ಸಚಿವರು ನೀಡಿರುವ ಉತ್ತರದಲ್ಲಿ ಇದು ಬಯಲಾಗಿದೆ.ಜಮ್ಮಾಬಾಣೆ ಜಾಗಕ್ಕೆ ಕಂದಾಯ ನಿಗದಿಪಡಿಸಲು ಎಷ್ಟು ಎಕರೆ ಬಾಕಿ ಇದೆ, ಎಷ್ಟು ಎಕರೆ ಜಾಗಕ್ಕೆ ಕಂದಾಯ ನಿಗದಿಪಡಿಸಲಾಗಿದೆ, ಎಷ್ಟು ಅರ್ಜಿ ಸಲ್ಲಿಕೆಯಾಗಿದ್ದು, ಎಷ್ಟು ಬಾಕಿ ಉಳಿದಿದೆ, ಎಕರೆಗೆ ಎಷ್ಟು ಕಂದಾಯ ಹಾಗೂ ಕಂದಾಯ ವಿಧಿಸಲು ಇರುವ ತೊಡಕುಗಳು ಏನು ಎಂಬ ಗಂಭೀರ ಪ್ರಶ್ನೆಯನ್ನು ವೀಣಾ ಅಚ್ಚಯ್ಯ ಮುಂದಿಟ್ಟಿದ್ದರು.

ಇದಕ್ಕೆ ಉತ್ತರ ನೀಡಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಇದಕ್ಕೆ ಸಮಜಾಯಿಷಿಕೆ ಯೊಂದಿಗೆ ವಿವರ ನೀಡಿದ್ದಾರೆ.

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಒಟ್ಟು 2,19,376.51 ಎಕರೆ ಬಾಣೆ ಜಮೀನು ಇದ್ದು, ಇದರಲ್ಲಿ 1,83,219.29 ಎಕರೆ ಕಂದಾಯಕ್ಕೆ ಬಂದಿದೆ. 31,157.22 ಎಕರೆ ಜಾಗ ಕಂದಾಯಕ್ಕೆ ಬರಲು ಬಾಕಿ ಇದೆ. ಕಂದಾಯ ನಿಗದಿಗೆ ಕೋರಿ 33,226 ಅರ್ಜಿಗಳು ಬಂದಿದ್ದು, ಈ ಪೈಕಿ 334 ಅರ್ಜಿ ಬಾಕಿ ಇವೆ ಎಂದು ಸಚಿವರು ತಿಳಿಸಿದ್ದಾರೆ.

ಸಮಸ್ಯೆಗಳ ವಿವರ

ಸರ್ವೆ ಶಾಖೆಯಿಂದ ನೆಲಪ್ರತಿ ಆಧಾರದಂತೆ 1.00 ಎಕರೆಗೆ ರೂ. 8.19 ಹಾಗೂ 9.36ರ ದರದಲ್ಲಿ ಕಂದಾಯ ನಿಗದಿಪಡಿಸಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಆಕಾರ್‍ಬಂದ್ ಹಾಗೂ ಆರ್.ಟಿ.ಸಿ. ವಿಸ್ತೀರ್ಣಗಳಿಗೆ ತಾಳೆ ಇರುವದಿಲ್ಲ. ಅಲ್ಲದೆ ಈ ಪೈಕಿ ಆರ್.ಟಿ.ಸಿ.ಗಳು ಕೂಡ ಬೇರೆ ಬೇರೆ ನಿಬಂಧನೆ ಗಳಲ್ಲಿದ್ದು, ಆರ್.ಟಿ.ಸಿ. ಒಟ್ಟುಗೂಡಿಸು ವದು ಸಾಧ್ಯವಾಗುತ್ತಿಲ್ಲ.

ನಿಯಮಾನುಸಾರ ಆರ್.ಟಿ.ಸಿ. ಹಾಗೂ ಆಕಾರ್‍ಬಂದ್ ಕ್ಷೇತ್ರ ತಾಳೆ ಇಲ್ಲದೆ ದುರಸ್ತಿ ಮಾಡುವಂತಿಲ್ಲ. ಇದರಿಂದ ದುರಸ್ತಿಗೆ ವಿಳಂಬವಾಗು ತ್ತಿದೆ. ಹಕ್ಕು ದಾಖಲೆಗಳು ಪಟ್ಟೆದಾರರ ಹೆಸರಿನಲ್ಲಿದ್ದು, ಅರ್ಜಿದಾರರು ತೋರಿಸುವ ಜಾಗವು ನೈಜವಾಗಿ ಅವರ ಸ್ವಾಧೀನದ ಜಾಗವೇ ಅಥವಾ ಹೊರ ಊರುಗಳಲ್ಲಿ ವಾಸವಿರುವ ಅವರ ಕುಟುಂಬಸ್ಥರ ಸ್ವಾಧೀನದ ಜಾಗವೇ ಎಂದು ಕಂಡು ಹಿಡಿಯುವದು ಕಷ್ಟವಾಗಿರುತ್ತದೆ.

ಸರ್ವೆ ಹಾಗೂ ಕಂದಾಯ ದಾಖಲೆಗಳಂತೆ ಪೂರಾ ಸರ್ವೆ ನಂಬರ್ ಇದ್ದರೂ ಅರ್ಜಿದಾರರು ಅವರ ಸ್ವಾಧೀನದಲ್ಲಿರುವ ಜಾಗಕ್ಕೆ ಮಾತ್ರ ಕಂದಾಯ ನಿಗದಿಗೆ ಅರ್ಜಿ ಹಾಕುತ್ತಿದ್ದು, ಉಳಿಕೆ ಕ್ಷೇತ್ರವು ಯಾರ ಸ್ವಾಧೀನದಲ್ಲಿ ಇದೆ ಎಂಬ ಬಗ್ಗೆ ಹಾಗೂ ಅವರಿಗೆ ಹಕ್ಕು ಇದೆಯೇ ಎಂಬದರ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದ ಒಂದೇ ಸರ್ವೆ ನಂಬರಿನ ಕಂದಾಯ ನಿಗದಿಗೆ ಪ್ರತಿ ಸ್ವಾಧೀನದಾರರು ಅರ್ಜಿ ಹಾಕಿದ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಸರ್ವೆಗೆ ಹೋಗುವ ಅನಿವಾರ್ಯತೆ ಉಂಟಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.