ಮಡಿಕೇರಿ, ಜೂ. 14: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ತಾ. 17 ರಂದು ಮಡಿಕೇರಿಯಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಮಹೀಂದ್ರಾ ಹಾಲಿಡೇ ಅಂಡ್ ರೆಸಾರ್ಟ್, ವಿವಾಂತ ಬೈ ತಾಜ್, ಅಪೊಲೋ ಹೆಲ್ತ್‍ಕೇರ್, ಯುರೇಕಾ ಫೋಭ್ರ್ಸ್, ಹೆಚ್‍ಜಿಎಸ್ ಗ್ಲೋಬಲ್ ಸಲ್ಯೂಷನ್ಸ್, ಆರೇಂಜ್ ಕೌಂಟಿ, ವುಡ್‍ಲ್ಯಾಂಡ್ಸ್, ಫ್ರೆಂಡ್ಲಿ ಮೋಟಾರ್ಸ್, ಹೆಚ್‍ಡಿಎಫ್‍ಸಿ, ಟ್ರಾವೆಲ್ ಕೂರ್ಗ್ ಹಾಗೂ ಇತರ ಖಾಸಗಿ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಮೇಳವು ತಾ. 17 ರಂದು ಬೆಳಿಗ್ಗೆ 10 ರಿಂದ 3ಗಂಟೆಯವರೆಗೆ ಸರಕಾರಿ ಕೈಗಾರಿಕಾ ಸಂಸ್ಥೆ, ಮಡಿಕೇರಿಯಲ್ಲಿ ನಡೆಯಲಿದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಪ್ಲೋಮ, ಐ.ಟಿ.ಐ., ನರ್ಸಿಂಗ್(ಎ.ಎನ್.ಎಂ, ಜಿ.ಎನ್.ಎಂ) ಹಾಗೂ ಯಾವದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿರುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಹಾಜರಾಗಲು ತಿಳಿಸಲಾಗಿದೆ.