ಕುಶಾಲನಗರ, ಜೂ. 14: ಸಮೀಪದ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ತಾ. 21 ರಂದು `ಕ್ಯಾಂಪಸ್ ನೋಡ ಬನ್ನಿ' ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಪ್ರಬಾರ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಅಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಕೆ. ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಕ್ಯಾಂಪಸ್‍ಗೆ ನೇರವಾಗಿ ಭೇಟಿ ನೀಡಿ, ಲಭ್ಯವಿರುವ ವಿವಿಧ ವಿಭಾಗಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳು, ಸಂಶೋಧನೆ, ನೂತನವಾಗಿ ಪ್ರಾರಂಭವಾಗುತ್ತಿರುವ ಕೋರ್ಸ್‍ಗಳ ವಿವರ ಹಾಗೂ ಸ್ನಾತಕೋತ್ತರ ಪ್ರವೇಶಾತಿ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

ಕೇಂದ್ರದಲ್ಲಿ ಲಭ್ಯವಿರುವ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು, ಯಾವದೇ ವಿಭಾಗಗಳಿಗೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಬೋಧಕ ವೃಂದದೊಂದಿಗೆ ಸಮಾಲೋಚನೆ ನಡೆಸಿ ತಮಗೆ ಸೂಕ್ತವೆನಿಸಿದ ವಿಭಾಗವನ್ನು ಆಯ್ಕೆ ಮಾಡಿಕೊಂಡು ಸ್ಥಳದಲ್ಲಿಯೇ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಸ್ನಾತಕೋತ್ತರ ಕೇಂದ್ರದಲ್ಲಿ ಈಗಾಗಲೇ 7 ವಿಭಾಗಗಳಲ್ಲಿ ಅಧ್ಯಯನ ಕಾರ್ಯ ಮುಂದುವರಿ ಯುತ್ತಿದ್ದು, ಇದರ ಜೊತೆಗೆ ಎಂ.ಎಸ್ಸಿ ಇನ್ ಕೆಮಿಸ್ಟ್ರಿ, ಕಂಪ್ಯೂಟರ್ ಸೈನ್ಸ್, ಎನ್ವಿರಾನ್ಮೆಂಟಲ್ ಸೈನ್ಸ್, ಬೋಟನಿ ಹಾಗೂ ಪತ್ರಿಕೋದ್ಯಮ ಕೋರ್ಸ್ ಗಳನ್ನು ಆರಂಭಿಸಲಾಗುತ್ತಿದೆ ಎಂದರು. ಪತ್ರಿಕೋದ್ಯಮ ವಿಭಾಗಕ್ಕೆ ಸೇರ್ಪಡೆ ಗೊಳ್ಳಲು ಇಚ್ಚಿಸುವವರು ಯಾವದೇ ವಿಭಾಗದಲ್ಲಿ ಪದವಿ ಗಳಿಸಿದಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಯುಜಿಸಿ ನಿಯಮಾವಳಿ ಯಾನುಸಾರ ಕೇಂದ್ರದಲ್ಲಿ ಸಾಮಾಜಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 10 ಸಮಿತಿಗಳನ್ನು ರಚಿಸಿ, ಅವುಗಳಿಗೆ ಸಂಚಾಲಕರನ್ನು ಕೂಡ ಈಗಾಗಲೇ ನೇಮಿಸಲಾಗಿದೆ. ಅವುಗಳ ಕಾರ್ಯಗಳು 2017-18ನೇ ಶೈಕ್ಷಣಿಕ ವರ್ಷದಿಂದ ನಿರಂತರವಾಗಿ ಕಾರ್ಯ ನಿರ್ವಹಿಸಲಿವೆ ಎಂದರು. ಅಳುವಾರ ವಿಶ್ವವಿದ್ಯಾನಿಲಯದಲ್ಲಿ ಈಗಾಗಲೆ ನೆರೆಯ ರಾಜ್ಯಗಳು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು ಸಂಶೋಧನಾ ವಿಭಾಗಗಳಲ್ಲಿ ಕಾರ್ಯನಿರ್ವ ಹಿಸುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು.

ಸಂಸ್ಥೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿ/ವಿದ್ಯಾರ್ಥಿಗಳಿಗೆ ಆಧುನೀಕೃತ ಪ್ರಯೋಗಾಲಯ, ವಿದ್ಯಾರ್ಥಿನಿಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುತ್ತದೆ. ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಅಳುವಾರ ಸ್ನಾತಕೋತ್ತರ ಕೇಂದ್ರದ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 08276-276485, 276474 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು. ಈ ಸಂದರ್ಭ ಪ್ರೊ. ಚಂದ್ರಶೇಖರ್, ಡಾ. ಕೇಶವಮೂರ್ತಿ, ಪ್ರಾಧ್ಯಾಪಕರುಗಳಾದ ಜಮೀರ್ ಅಹಮ್ಮದ್, ವೆಂಕಟೇಶ್ ಇದ್ದರು.