ಮಡಿಕೇರಿ, ಜೂ. 14: ಮಡಿಕೇರಿಯ ಮಹದೇವಪೇಟೆ ಅಂಚಿನಲ್ಲಿ ಎ.ವಿ. ಶಾಲೆಗೆ ಹೊಂದಿಕೊಂಡಂತೆ ಶಿಲೆಯ ಕೆತ್ತನೆಯಿಂದ ಕೂಡಿದ ಸುಂದರ ಬನ್ನಿಮಂಟಪ ರೂಪುಗೊಂಡು ವರ್ಷಗಳೇ ಕಳೆದಿವೆ. ಈ ಬನ್ನಿಮಂಟಪಕ್ಕೆ ಹೊಂದಿಕೊಂಡು ಬನ್ನಿ ಮರ ಸಹಿತ ಅಂದದ ಹೂವು ಗಿಡಗಳು ಪರಿಮಳ ಸೂಸುತ್ತಿವೆ.

ವರ್ಷಂಪ್ರತಿ ದಸರಾ ಪರ್ವಕಾಲ ಬನ್ನಿಮಂಟಪದ ಮಹಿಮೆಯು ತಿಳಿಯಲಿದೆ. ಈ ಮಂಟಪಕ್ಕೆ ಹೊಂದಿಕೊಂಡಂತೆ ಪಕ್ಕದ ನಿವಾಸಿ ಬಸವರಾಜು ವಾಸವಿದ್ದಾರೆ. ಬನ್ನಿಮಂಟಪ ರೂಪುಗೊಂಡ ದಿನದಿಂದಲೇ ಪ್ರಸಕ್ತ ವರ್ಷದಲ್ಲಿ ನಿತ್ಯವೂ ಬಸವರಾಜು ಅವರು ಈ ಪರಿಸರದಲ್ಲಿ ಹೂವಿನ ಗಿಡಗಳನ್ನು ನೆಟ್ಟು ನಿತ್ಯ ಮಣ್ಣು-ಗೊಬ್ಬರದೊಂದಿಗೆ ನೀರೆರೆದು ಪೋಷಿಸಿಕೊಂಡು ಬರುತ್ತಿದ್ದಾರೆ.

ಪ್ರತಿಯೊಬ್ಬರು ತಾನು-ತನ್ನದೆಂದು ಯೋಚಿಸುವ ದಿನಗಳಲ್ಲಿ ಬಸವರಾಜು ಅವರಂಥ ಸಾಮಾನ್ಯ ಪ್ರಜೆ ಒಂದು ವ್ಯವಸ್ಥೆಯಡಿ ರೂಪುಗೊಂಡಿರುವ ಬನ್ನಿಮಂಟಪದ ಸೊಬಗು ಕಾಪಾಡುವಲ್ಲಿ ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಎಲೆ ಮರೆಯ ಕಾಯಿಯಂತೆ ಕಾಯಕ ನಿರತರಾಗಿರುವದು ಶ್ಲಾಘನೀಯ.

- ಶ್ರೀಸುತ