ವೀರಾಜಪೇಟೆ, ಜೂ. 14: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿನ ನೀರಿನ ಸಮಸ್ಯೆ ಕೂಡಲೇ ಬಗೆ ಹರಿಸುವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್‍ಗೆ ಆದೇಶ ನೀಡಿದರು.

ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಮಾಹಿತಿ ನೀಡಿ 240 ಹಾಸಿಗೆ ಇರುವ ಆಸ್ಪತ್ರೆಗೆ ಪ್ರತಿದಿನ 20 ಸಾವಿರ ಲೀಟರ್ ನೀರಿನ ಅವಶ್ಯಕತೆ ಇದೆ. ಒಂದು ಬೋರ್‍ವೆಲ್ ಇದ್ದು ಅದರಲ್ಲಿ ನೀರಿನ ಪ್ರಮಾಣ ಕುಂಠಿತಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಟ್ಟಣ ಪಂಚಾಯಿತಿ ನೀರನ್ನು ಪೂರೈಸುತ್ತಿದ್ದು ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿದೆ. ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಸದ್ಯದಲ್ಲಿಯೇ ಡಯಾಲಿಸಿಸ್ ಸೆಂಟರ್ ಹಾಗೂ ಐ.ಸಿ.ಯು ಪ್ರಾರಂಭವಾಗುತ್ತಿರುವದ ರಿಂದ ನೀರು ಸಾಕಾಗುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಬೋರ್‍ವೆಲ್ ಪಕ್ಕದಲ್ಲಿ ಗುಂಡಿ ತೆಗೆದು ಮಳೆ ಕೊಯಿಲು ವಿಧಾನವನ್ನು ಅನುಸರಿಸಿ ನೀರಿನ ಮಟ್ಟವನ್ನು ಹೆಚ್ಚಿಸಬಹುದು. ಕೂಡಲೇ ಕಾವiಗಾರಿಗೆ ಚಾಲನೆ ನೀಡಿ ಎಂದು ಸ್ಥಳದಲ್ಲಿಯೇ ಆದೇಶ ನೀಡಿದರು.

ಮೂಳೆ ತಜ್ಞರ ಬಳಿ ಹೆಚ್ಚಿನ ರೋಗಿಗಳು ಕಂಡು ಬಂದ ಕಾರಣ ಸೋಮವಾರ ಹಾಗೂ ಬುಧವಾರ ರೋಗಿಗಳ ಸಂಖ್ಯೆ ಹೆಚ್ಚಿರುವದರಿಂದ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಹೆಚ್ಚಿನ ವೈದ್ಯರನ್ನು ನಿಯೋಜಿಸಿ, ಬಿಪಿಎಲ್, ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಎಲ್ಲಾ ಪರೀಕ್ಷೆಗಳನ್ನು ಉಚಿತ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು. ಆಪರೇಷನ್ ಥಿಯೇಟರ್, ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲಾ ವಾರ್ಡ್‍ಗಳನ್ನು ಪರಿಶೀಲಿಸಿ ಶುಚಿತ್ವದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಉಪ ವಿಭಾಗಾಧಿಕಾರಿ ನಂಜುಂಡೇಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಮತ್ತಿತರರು ಇದ್ದರು.