ಮಡಿಕೇರಿ, ಜೂ. 14: ಹಾಕಿ ಇಂಡಿಯಾ ವತಿಯಿಂದ ಜೂ. 15 ರಿಂದ 25ರವರೆಗೆ ಲಕ್ನೋದಲ್ಲಿ ನಡೆಯಲಿರುವ 7ನೇ ಸೀನಿಯರ್ ಮೆನ್ ರಾಷ್ಟ್ರೀಯ ಹಾಕಿ ಪಂದ್ಯಾವಳಿ (ಎ. ಡಿವಿಜನ್)ಯಲ್ಲಿ ಪಾಲ್ಗೊಳ್ಳಲಿರುವ ಹಾಕಿ ಕರ್ನಾಟಕ ತಂಡದಲ್ಲಿ ಬಹುತೇಕ ಕೊಡಗಿನ ಆಟಗಾರರೇ ಸ್ಥಾನ ಪಡೆದಿದ್ದಾರೆ. ಹಾಕಿ ಕರ್ನಾಟಕ ಪ್ರಕಟಿಸಿರುವ ತಂಡದ 18 ಸದಸ್ಯರ ಪೈಕಿ 11 ಮಂದಿ ಕೊಡಗು ಮೂಲದವರಾಗಿದ್ದಾರೆ.

ತಂಡದ ನಾಯಕನಾಗಿ ಪುದಿಯೊಕ್ಕಡ ಬೆಲ್ಲು ಸೋಮಯ್ಯ ಅವರ ಪುತ್ರ ಪ್ರಧಾನ್ ಸೋಮಣ್ಣ ತಂಡವನ್ನು ಮುನ್ನಡೆಸಲಿದ್ದು, ಇವರೊಂದಿಗೆ ಕೊಡಗಿನವರಾದ ಎಸ್. ಕೆ. ಅಪ್ಪಚ್ಚು, ಕೆ.ಟಿ. ಕಾರ್ಯಪ್ಪ, ಎ.ಡಿ. ನಿರ್ಮಲ್ ಚಿಣ್ಣಪ್ಪ, ವಿ.ಟಿ. ರತನ್ ಮುತ್ತಣ್ಣ, ಹೆಚ್.ಎಸ್. ಅಭಿಷೇಕ್, ಎಂ.ಜಿ. ಪೂಣಚ್ಚ, ಕೆ.ಪಿ. ಸೋಮಯ್ಯ, ಪಿ.ಎ. ಮಾಚಯ್ಯ, ಕೆ.ಆರ್. ಭರತ್ ತಂಡದಲ್ಲಿದ್ದಾರೆ. ತಂಡದ ಕೋಚ್ ಆಗಿಯೂ ಭಾರತ ಮಹಿಳಾ ತಂಡದ ಮಾಜಿ ಕೋಚ್, ಕೊಡಗಿನವರಾದ ಸಂದೀಪ್ ಸೋಮೇಶ್ ಕಾರ್ಯನಿರ್ವಹಿಸಲಿ ದ್ದಾರೆ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.