ಸಿದ್ದಾಪುರ, ಜೂ. 14: ವಿದ್ಯುತ್ ಸ್ಪರ್ಶದಿಂದ 2 ಹೆಣ್ಣು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ.ಅಮ್ಮತ್ತಿ ಸಮೀಪದ ಕಣ್ಣಂಗಾಲ ಗ್ರಾಮದ ಜ್ಯೋತಿಲ್ಯಾಂಡ್ ಎಂಬ ತೋಟದಲ್ಲಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ 2 ಕಾಡಾನೆಗಳು ಸಾವನ್ನಪ್ಪಿವೆ. ಎರಡು ಕುಟುಂಬಗಳ ನಡುವೆ ನ್ಯಾಯಾಲಯದಲ್ಲಿನ ಜಾಗ ವಿವಾದದಿಂದಾಗಿ ಜ್ಯೋತಿಲ್ಯಾಂಡ್ ತೋಟದಲ್ಲಿ ಕೆಲಸ ಕಾರ್ಯಗಳು ನಡೆಯದೆ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ. ಆನೆಗಳಿಗೆ ಬೈನೆ ಮರದ ತಿರುಳೆಂದರೆ ಪಂಚ ಪ್ರಾಣ.

(ಮೊದಲ ಪುಟದಿಂದ) ಈ ಅಲಕ್ಷಿತ ತೋಟದೊಳಗೆ ಸಾಕಷ್ಟು ಬೈನೆ ಮರಗÀಳಿರುವದರÀ ಅರಿವಾದ ಸುಮಾರು 5 ಆನೆಗಳು ತೋಟಕ್ಕೆ ನುಗ್ಗಿವೆ. ಈ ಪೈಕಿ 1 ಗಂಡಾನೆ ಹಾಗೂ 1 ಮರಿಯಾನೆಯೂ ಸೇರಿದೆ. 2 ಹೆಣ್ಣಾನೆಗಳು ಬೈನೆ ಮರದ ಕೊಂಬೆಗಳನ್ನು ಎಳೆದು ಖುಷಿಯಿಂದ ಮೇಯುತ್ತಿರುವಾಗಲೇ ಸನಿಹದಲ್ಲಿಯೇ ಯಮನ ಪಾಶದಂತೆ ವಿದ್ಯುತ್ ತಂತಿಗಳು ಹಾದುಹೋಗಿರುವದರ ಅರಿವಾಗಿಲ್ಲ. ಈ ವಿದ್ಯುತ್ ತಂತಿಗಳು ಕೇವಲ 4 ರಿಂದ 6 ಅಡಿ ಎತ್ತರಕ್ಕೆ ಮಾತ್ರ ಹಾದು ಹೋಗಿದೆ. ಕಣ್ಣಂಗಾಲ ಗ್ರಾಮದಲ್ಲಿ ಇದೇ ರೀತಿ ತಗ್ಗು ಪ್ರದೇಶದಲ್ಲಿ ವಿದ್ಯುತ್ ತಂತಿಗಳು ನೇತಾಡುವ ಸ್ಥಿತಿಯಲ್ಲ್ಲಿದ್ದು, ಈ ಬಗ್ಗೆ ಇಲಾಖೆಗೆ ಗ್ರಾಮಸ್ಥರು ಸರಿಪಡಿಸಲು ಮಾಡಿದ ಮನವಿಗೆ ಎಳ್ಳಷ್ಟೂ ಸ್ಪಂದನ ದೊರೆತಿಲ್ಲ. ಇದೀಗ ಬೃಹತ್ ಗಾತ್ರದ ಜೀವಂತ ಆನೆಗಳನ್ನೆ ಧರೆಗುರುಳಿಸಲು ಈ ದುರವಸ್ಥೆ ಕಾರಣವಾಗಿದೆ ಎಂಬದು ಗ್ರಾಮಸ್ಥರ ಆರೋಪ.

ತೋಟಕ್ಕೆ ನುಗ್ಗಿದ ಕಾಡಾನೆಗಳ ಪೈಕಿ ಅಂದಾಜು 40 ವರ್ಷ ಪ್ರಾಯದ ಹಾಗೂ 26 ವರ್ಷ ಪ್ರಾಯದ ಎರಡು ಹೆಣ್ಣಾನೆಗಳು ಬೈನೆ ಮರದ ಸೊಪ್ಪು ತಿನ್ನಲು ಸೊಂಡಿಲಿನಿಂದ ಎಳೆದ ಪರಿಣಾಮ ಸಮೀಪದಲ್ಲೇ ಕೆಳಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ. ಕಾಡಾನೆಗಳ ಕಣ್ಣು ಹಾಗೂ ಸೊಂಡಿಲಿನ ಭಾಗಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಬಗ್ಗೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ವೀರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಹಾಗೂ ಸಿಬ್ಬಂದಿ ಈ ಪ್ರದೇಶದಲ್ಲಿ ಗಸ್ತು ತಿರುಗುವ ಸಂದರ್ಭ ಕಾಡಾನೆಗಳು ಸಾವನ್ನಪ್ಪಿರುವದು ಕಂಡುಬಂದಿದ್ದು, ಇತರ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಕಾಡಾನೆಗಳ ಹಿಂಡಿನ ಪೈಕಿ ಮರಿ ಆನೆ ಸೇರಿದಂತೆ ಇತರ ಎರಡು ಕಾಡಾನೆಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಮೃತಪಟ್ಟ ಕಾಡಾನೆಗಳ ಸಮೀಪದಲ್ಲೇ ಸುತ್ತಾಡುತ್ತಿದ್ದು, ತಮ್ಮ ಸಹಚರರ ಸಾವಿನಿಂದ ನೊಂದು ಆಕ್ರಂದನಗೈಯ್ಯುತ್ತಿದ್ದುದು ಕರುಣಾಜನಕವೆನಿಸಿತ್ತು. ಕಾಡಾನೆಗಳು ಮೃತಪಟ್ಟ ಸ್ಥಳದಲ್ಲಿ ಬುಧವಾರದಂದು ಅರಣ್ಯಾಧಿಕಾರಿಗಳು ಭೇಟಿ ನೀಡಿದ ಸಂದರ್ಭ ಎರಡು ಕಾಡಾನೆಗಳು ಸುತ್ತಾಡುತ್ತಿದ್ದು, ಮೃತಪಟ್ಟ ಕಾಡಾನೆಗಳನ್ನು ವೀಕ್ಷಿಸಲು ಬಂದವರಿಗೆ ಆತಂಕ ಎದುರಾಗಿತ್ತು. ನಂತರ ಅರಣ್ಯ ಸಿಬ್ಬಂದಿಗಳು ಆನೆಗಳನ್ನು ಸಮೀಪದ ತೋಟಕ್ಕೆ ಅಟ್ಟಿದರು.

ಬಳಿಕ ಮೃತಪಟ್ಟ ಕಾಡಾನೆಗಳ ಮರಣೋತ್ತರ ಪರೀಕ್ಷೆಯನ್ನು ವನ್ಯಜೀವಿ ವೈದ್ಯಾಧಿಕಾರಿ ಡಾ. ಉಮಾಶಂಕರ್ ನಡೆಸಿದರು. ಕಾಡಾನೆಗಳ ಮೃತದೇಹವನ್ನು ಅದೇ ಪಾಳುಬಿದ್ದ ಕಾಫಿ ತೋಟದಲ್ಲಿ ಹೂಳಲಾಯಿತು. ಉಪ ಅರಣ್ಯ ವಲಯಾಧಿಕಾರಿ ದೇವಯ್ಯ ಅವರ ಪ್ರಕಾರ ವಿದ್ಯುತ್ ತಂತಿಗಳು ಅತಿ ಕೆಳಭಾಗದಲ್ಲಿ ಹಾದುಹೋಗಿರುವದು ಈ ದುರಂತಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಇಲಾಖೆಗೆ ನೀಡಿರುವ ಪುಕಾರಿನಲ್ಲಿ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದ ಕುರಿತೂ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿ.ಸಿ.ಎಫ್ ಮರಿಯಾ ಕ್ರಿಸ್ಟಿರಾಜ್, ಎ.ಸಿ.ಎಫ್ ರೋಶಿಣಿ ಹಾಗೂ ವಲಯ ಅರಣ್ಯಾಧಿಕಾರಿ ಗೋಪಾಲ ಭೇಟಿ ನೀಡಿ ಪರಿಶೀಲಿಸಿದರು.