ಗೋಣಿಕೊಪ್ಪಲು, ಜೂ. 14: ಗ್ರಾಮೀಣ ಭಾಗದಲ್ಲಿರುವ ದಲಿತರ ಸಮಸ್ಯೆಗಳನ್ನು ಜಿಲ್ಲಾಡಳಿತ ಕೂಡಲೇ ಬಗೆಹರಿಸಿ ತುರ್ತು ಕ್ರಮಕ್ಕೆ ಮುಂದಾಗಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ್ ಆಗ್ರಹಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ತಾಲೂಕು ದಸಂಸ ವತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾಲೂಕು ಕಚೇರಿಗಳಲ್ಲಿ ದಲಿತರ ಕಡತಗಳು ನೆನೆಗುದಿಗೆ ಬಿದ್ದಿದ್ದು ಕೂಡಲೇ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡುವಂತೆ ಒತ್ತಾಯಿಸಿದರು.

ವಿದ್ಯಾರ್ಥಿಗಳ ಅನುಕೂಲಕ್ಕಿರುವ ವಿದ್ಯಾರ್ಥಿ ನಿಲಯಗಳಲ್ಲಿ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಹಾಗೂ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ಪಾಠ ಪ್ರವಚನ ನೀಡುವಂತೆ ಹೇಳಿದರು.

ಕೊಡಗು ಧ್ವನಿ ವಾರಪತ್ರಿಕೆಯ ಸಂಪಾದಕ ಹೆಚ್.ಕೆ. ಜಗದೀಶ್ ಪ್ರಕಟಿಸಿದ ಮಾನವೀಯ ವರದಿ ಹಾಗೂ ಪ್ರಜಾಸತ್ಯ ಪತ್ರಿಕೆಯ ವರದಿಗಾರ ರಾಕೇಶ್ ಕೊಡಗು ಬರೆದ ತನಿಖಾ ವರದಿಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡಿದ ಪ್ರಶಸ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ದಸಂಸದಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ದಸಂಸ ಸಂಚಾಲಕ ಕುಮಾರ್, ಸಂಘಟನಾ ಸಂಚಾಲಕ ಉಣ್ಣಿಕೃಷ್ಣ, ಸದಸ್ಯರಾದ ತಂಗರಾಜು, ಕೃಷ್ಣ ಷಣ್ಮುಗಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ್ ಮಹಾದೇವ್ ಸ್ವಾಗತಿಸಿ ವಂದಿಸಿದರು.