ಮಡಿಕೇರಿ, ಜೂ. 15: ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಹಾಗೂ ಬೆಳೆಗಾರರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಹಾಯಧನ ಲಭಿಸದಿರುವ ಬಗ್ಗೆ ಅಗತ್ಯ ಗಮನ ಹರಿಸುವದರೊಂದಿಗೆ ಕೃಷಿಕರಿಗೆ ಅನ್ವಯವಾಗುವ ಫಸಲು ಭೀಮಾ ವಿಮಾ ಯೋಜನೆಯನ್ನು ಕೂಡ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಇಂದು ಆಯೋಜಿಸಲಾಗಿದ್ದ ಕೇಂದ್ರ ಸರಕಾರದ ಮೂರು ವರ್ಷಗಳ ಸಾಧನಾ ಸಮಾವೇಶಕ್ಕೆ ಆಗಮಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್ ಹಾಗೂ ಜಿಲ್ಲೆಯ ಕಾಫಿ ಮಂಡಳಿ ಸದಸ್ಯರುಗಳು ಖುದ್ದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಆ ಮೊದಲು ಚಿಕ್ಕಮಗಳೂರು, ಹಾಸನ ಸೇರಿದಂತೆ ಇತರೆಡೆಯ ಬೆಳೆಗಾರ ಪ್ರತಿನಿಧಿಗಳು ಮತ್ತು ಕಾಫಿ ಬೆಳೆಗಾರರ ಒಕ್ಕೂಟದ ಅಲ್ಲಿನ ಪ್ರಮುಖರು ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ಕಳೆದ ಮೂರು ವರ್ಷಗಳಿಂದ ಲಭಿಸಬೇಕಾದ ಕೇಂದ್ರ ಸರಕಾರದ ಸವಲತ್ತುಗಳ ಕುರಿತು ಗಮನ ಸೆಳೆದರು.

ಈ ವೇಳೆ ಕಾಫಿ ಮಂಡಳಿ ಉಪಾಧ್ಯಕ್ಷರೊಂದಿಗೆ ಜಿಲ್ಲೆಯ ಸದಸ್ಯರುಗಳಾದ ಮಚ್ಚಾಮಾಡ ಡಾಲಿ ಚಂಗಪ್ಪ, ಬೊಟ್ಟಂಗಡ ರಾಜು, ಎಂ.ಬಿ. ಅಭಿಮನ್ಯು ಕುಮಾರ್, ಜಿ.ಎಲ್. ನಾಗರಾಜ್ ಇವರುಗಳು ನಿರ್ಮಲಾ ಸೀತಾರಾಮನ್ ಅವರನ್ನು ಪ್ರತ್ಯೇಕ ಭೇಟಿ ಮಾಡಿ ಮಾತುಕತೆ ನಡೆಸಿದರು.

ಕಾಫಿ ಮಂಡಳಿ ಸದಸ್ಯರೊಂದಿಗೆ ಅಭಿಪ್ರಾಯ ಆಲಿಸಿದ ಸಚಿವರು ಕೇಂದ್ರ ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಮಸ್ಯೆ ಇಲ್ಲವೆಂದು ತಿಳಿಸಿದ್ದು, ಕಾಲ ಕಾಲಕ್ಕೆ ಬೆಳೆಗಾರರಿಗೆ ಲಭ್ಯವಾಗಲಿರುವ ಸವಲತ್ತುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಿದರೆ ತಕ್ಷಣದಿಂದ ಹಣ ಬಿಡುಗಡೆಗೊಳಿಸಲಾಗುವದು ಎಂದು ಆಶ್ವಾಸನೆ ನೀಡಿದರು.

ಈ ವೇಳೆ ಉಪಾಧ್ಯಕ್ಷೆ ರೀನಾ ಹಾಗೂ ಅಭಿಮನ್ಯುಕುಮಾರ್ ಅವರುಗಳು ಕೊಡಗಿನಲ್ಲಿ ಕಾಫಿ ಬೆಳೆಗಾರರ ಸಂಕಷ್ಟ ಕುರಿತು ಮನವರಿಕೆ ಮಾಡಿಕೊಟ್ಟಿದ್ದು, ಆ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಸಚಿವರು ಬೆಳೆಗಾರರಿಗೆ ಇತರ ಕೃಷಿಕರಂತೆ ಫಸಲು ವಿಮಾ ಯೋಜನೆ ಕಲ್ಪಿಸಿ ಕೊಡಲಾಗುವದು ಎಂದು ಭರವಸೆ ನೀಡಿದ್ದಾರೆ.

ಅಲ್ಲದೆ ತೀರಾ ಸಣ್ಣ ಕಾಫಿ ಬೆಳೆಗಾರರಿಗೆ ಕಾಫಿ ತೋಟಗಳಲ್ಲೇ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ತುಂತುರು ನೀರಾವರಿಗೆ ಪೂರಕ ಯೋಜನೆ ಅನುಷ್ಠಾನದ ಬಗ್ಗೆ ಒತ್ತು ನೀಡಲು ಎಲ್ಲಾ ರೀತಿಯ ಸಹಕಾರದೊಂದಿಗೆ ಸರಕಾರವು ಸಹಾಯಧನ ಒದಗಿಸಲಿದೆ ಎಂದು ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ.

ಕಾಫಿ ಪಾರ್ಕ್ : ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಕಾಫಿ ಫಸಲು ಸಂಗ್ರಹಿಸಲು ಯೋಗ್ಯವಾದ ಕಾಫಿ ಪಾರ್ಕ್, ಪೆಪ್ಪರ್ (ಕಾಳು ಮೆಣಸು) ಪಾರ್ಕ್ ಮತ್ತು ಸಂಬಾರ ಬೆಳೆಗಳಿಗೆ ಪೂರಕ ಯೋಜನೆ ಕಲ್ಪಿಸಿಕೊಡಲಾಗುವದು ಎಂದು ಆಶ್ವಾಸನೆ ನೀಡಿದ್ದಾರೆ.