ಎಂ.ಎಲ್.ಸಿ. ವೀಣಾ ಪ್ರಶ್ನೆಗೆ ಕೃಷಿ ಸಚಿವರಿಂದ ಉತ್ತರ

ಮಡಿಕೇರಿ, ಜೂ. 15: ಕೊಡಗು ಜಿಲ್ಲೆಯಲ್ಲಿ 1682 ಹೆಕ್ಟೇರ್ ವಿಸ್ತೀರ್ಣದ ಪ್ರದೇಶವನ್ನು ಸಾವಯವ ಕೃಷಿಗೆ ಉತ್ತೇಜನ ನೀಡಿ ಜಮೀನನ್ನು ಪರಿವರ್ತಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು 2012-13 ರಿಂದ ಇಲ್ಲಿಯವರೆಗೆ ಸಾವಯವ ಕೃಷಿ ಪದ್ಧತಿಗೆ ಒಳಪಟ್ಟಿರುವ ಜಮೀನಿನ ವಿಸ್ತೀರ್ಣ ಎಷ್ಟಿದೆ ಎಂಬ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

2012-13ರಲ್ಲಿ ಮಡಿಕೇರಿ ತಾಲೂಕಿನಲ್ಲಿ 100 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 100 ಹೆಕ್ಟೇರ್, 2013-14ರಲ್ಲಿ ಮಡಿಕೇರಿ ತಾಲೂಕಿನಲ್ಲಿ 300 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 502 ಹೆಕ್ಟೇರ್, ವೀರಾಜಪೇಟೆ ತಾಲೂಕಿನಲ್ಲಿ 500 ಹೆಕ್ಟೇರ್, 2015-16 ರಲ್ಲಿ ಮಡಿಕೇರಿ ತಾಲೂಕಿನಲ್ಲಿ 60 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 60 ಹೆಕ್ಟೇರ್ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 60 ಹೆಕ್ಟೇರ್ ಜಮೀನಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ 359 ಮಂದಿ ಸಾವಯವ ಕೃಷಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನಲ್ಲಿ 420 ಮಂದಿ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 280 ಮಂದಿ ಕೃಷಿಕರÀು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ ಮಡಿಕೇರಿ ತಾಲೂಕಿನಲ್ಲಿ 360 ಹೆಕ್ಟೇರ್, ಸೋಮವಾರಪೇಟೆ ತಾಲೂಕಿನಲ್ಲಿ 562 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 560 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿ ಪದ್ಧತಿಗೆ ಒಳಪಡಿಸಲಾಗಿದೆ. ಸಾವಯವ ಪದ್ಧತಿಯಲ್ಲಿ ಈ ಪ್ರದೇಶದಲ್ಲಿ ಜೇನು, ಭತ್ತ, ಕಾಳುಮೆಣಸು ಹಾಗೂ ಕಾಫಿ ಬೆಳೆಯನ್ನು ಬೆಳೆಯಲಾಗುತ್ತಿದೆ. ಈ ವ್ಯಾಪ್ತಿಯಲ್ಲಿ ಸುಮಾರು 24 ಸಾವಯವ ಕೃಷಿ ಸಂಘ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳಡಿ ನೋಂದಾಯಿತಗೊಂಡಿವೆ ಎಂದು ಮಾಹಿತಿ ನೀಡಿದ್ದಾರೆ.

ಸರಕಾರದ ಯೋಜನೆಗಳಡಿ ಸ್ಥಾಪಿಸಲಾದ ಈ ಸಂಘಗಳ ರೈತ ಸದಸ್ಯರುಗಳಿಗೆ ಸಾವಯವ ಸಂಪನ್ಮೂಲಗಳ ಉತ್ಪಾದನೆ, ಮಿಶ್ರ ಬೇಸಾಯ ಮತ್ತು ಬೆಳೆ ಪರಿವರ್ತನೆ, ಮಣ್ಣಿನ ಫಲವತ್ತತೆಯನ್ನು ವೃದ್ಧಿಸಲು ಸಾವಯವ ಗೊಬ್ಬರಗಳ ಬಳಕೆ, ಜೀವ ವೈವಿಧ್ಯತೆ ಸೃಷ್ಟಿಸಲು ಮಿಶ್ರ ಬೇಸಾಯ ಅಳವಡಿಕೆ, ಸಾವಯವ ಪರಿಸರ ಸ್ನೇಹಿ ಪೀಡೆನಾಶಕಗಳ ಬಳಕೆ, ರೈತರಿಗೆ ತರಬೇತಿ, ಸಾಮಥ್ರ್ಯವೃದ್ಧಿ ಮುಂತಾದ ಸಾವಯವ ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಳ್ಳಲು ರೈತರಿಗೆ ನೆರವು ನೀಡಲಾಗುತ್ತಿದೆ.

ಸಾವಯವ ಭಾಗ್ಯ ಯೋಜನೆಯಡಿಯ ಯೋಜನಾ ಪ್ರದೇಶವನ್ನು ಕರ್ನಾಟಕ ರಾಜ್ಯ ಸಾವಯವ ಪ್ರಮಾಣ ಸಂಸ್ಥೆ (ಏ.S.ಔ.ಅ.ಂ) ಮುಖಾಂತರ ಸಾವಯವ ಗುಂಪು ಪ್ರಮಾಣೀಕರಣಕ್ಕೆ ಒಳಪಡಿಸಲಾಗಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ರಾಜ್ಯಾದ್ಯಂತ 14 ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟಗಳನ್ನು ರಚಿಸಲಾಗಿದೆ. ಈ ಒಕ್ಕೂಟಗಳ ಮುಖಾಂತರ ಸಾವಯವ ಕೃಷಿ ಉತ್ಪನ್ನಗಳ ಸಂಗ್ರಹಣೆ, ಗ್ರೇಡಿಂಗ್, ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರ್ಯಾಂಡ್ ಅಭಿವೃದ್ಧಿ, ಮಾರುಕಟ್ಟೆ, ಬಳಕೆದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸ್ಥಾಪಿಸಲಾದ ರೈತ ಸಂಘಗಳ ಸದಸ್ಯರುಗಳನ್ನು ಸಹಭಾಗಿತ್ವ ಖಾತರಿ ವ್ಯವಸ್ಥೆಯಡಿ ಸಾವಯವ ಪ್ರಮಾಣೀಕರಣಕ್ಕೆ ಒಳಪಡಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.