ಕುಶಾಲನಗರ, ಜೂ. 15: ಕಳೆದ 2 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳ ಪ್ರಥಮ ಹಂತದ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಇಂದು ನಡೆಯಿತು. ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ 50 ಮದ್ಯಂತರ ಮತ್ತು ಮೂಲೆ ವಸತಿ ನಿವೇಶನಗಳ ಹರಾಜಿನಿಂದ ಒಟ್ಟು ರೂ 5.68 ಕೋಟಿ ರೂ. ಪಟ್ಟಣ ಪಂಚಾಯಿತಿಗೆ ಲಭಿಸಿತು.

ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಜಿಲ್ಲೆಯಿಂದ ಒಟ್ಟು 70 ಕ್ಕೂ ಅಧಿಕ ಮಂದಿ ಬಿಡ್ಡುದಾರರು ಪಾಲ್ಗೊಂಡಿದ್ದರು. ಕನಿಷ್ಟ 2 ಸೆಂಟ್ ವಿಸ್ತೀರ್ಣದಿಂದ 6 ಸೆಂಟ್ ವಿಸ್ತೀರ್ಣದ ನಿವೇಶನಗಳು ಹರಾಜಿನಲ್ಲಿ ಲಭ್ಯವಿತ್ತು.

ಹರಾಜು ಪ್ರಕ್ರಿಯೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಹರಾಜು ಪ್ರಕ್ರಿಯೆಯಿಂದ ಒಟ್ಟು ರೂ. 7.50 ಕೋಟಿ ನಿರೀಕ್ಷಿಸಲಾಗಿತ್ತಾದರೂ ರೂ 5.68 ಕೋಟಿಗೆ ಹರಾಜಾಗಿರು ವದು ತೃಪ್ತಿದಾಯಕವಾಗಿದೆ. ಹರಾಜಿನಿಂದ ದೊರೆತ ಹಣದಿಂದ ಬಡಾವಣೆಯನ್ನು ಅಭಿವೃದ್ಧಿಡಪಡಿಸ ಲಾಗುವದು. ಉಳಿದ ನಿವೇಶನಗಳ ಹರಾಜು ಪ್ರಕ್ರಿಯೆ ಬಗ್ಗೆ ಮುಂದಿನ ಸಭೆಯಲ್ಲಿ ತೀರ್ಮಾನಿಸಿ ದಿನಾಂಕ ನಿಗದಿಗೊಳಿಸಲಾಗುವದು ಎಂದರು.

ಪ.ಪಂ. ಅಧ್ಯಕ್ಷ ಎಂ.ಎಂ. ಚರಣ್ ಮಾತನಾಡಿ, ಕೆಲವು ಗೊಂದಲಗಳು ಹಾಗೂ ಅಪನಗದೀಕರಣದಿಂದಾಗಿ ಹೆಚ್ಚಿನ ಬಿಡ್ಡುದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ. ಮುಂದಿನ ದಿನಗಳಲ್ಲಿ 150 ನಿವೇಶನಗಳನ್ನು ಹರಾಜು ಮಾಡಲು ಕ್ರಮಕೈಗೊಳ್ಳಲಾಗುವದು ಎಂದರು.

ಹಲವು ಅಡ್ಡಿ ಅಡಚಣೆಗಳೊಂದಿಗೆ ನೆನೆಗುದಿಗೆ ಬಿದ್ದಿದ್ದ ಗುಂಡೂರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆಗೆ ಹಲವರಿಂದ ಆಕ್ಷೇಪಗಳು ಕೇಳಿಬಂದರೂ ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ ಅವರ ಮುತುವರ್ಜಿಯಿಂದ ನಿವೇಶನಗಳು ಹರಾಜಾಗಲು ಸಾಧ್ಯವಾಗಿದೆ.

ಹರಾಜು ಪ್ರಕ್ರಿಯೆ ಸಂದರ್ಭ ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಕುಶಾಲನಗರ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಕುಡಾ ಅಧ್ಯಕ್ಷ ಬಿ.ಜಿ.ಮಂಜುನಾಥ್, ಪಂಚಾಯ್ತಿ ಸದಸ್ಯರು ಇದ್ದರು.