ಕುಶಾಲನಗರ, ಜೂ. 15: ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ ಸರ್ಕಾರಿ ಯೋಜನೆಗಳು ನಿರರ್ಥಕವಾಗುವದ ರೊಂದಿಗೆ ಕುಶಾಲನಗರದಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಾಣದೆ ಜನಸಾಮಾನ್ಯರ ಕೂಗು ಕೇವಲ ಅರಣ್ಯ ರೋದನÀವಾಗುವಂತಾಗಿದೆ.

ಇದಕ್ಕೆ ಉದಾಹರಣೆ ಎಂಬಂತೆ ಕುಶಾಲನಗರ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಯಾವ ಮಟ್ಟದಲ್ಲಿ ಇದೆ ಎಂದರೆ, ಸರ್ಕಾರಿ ಆಸ್ಪತ್ರೆ ಪಾಳು ಬಿದ್ದ ಬಂಗಲೆಯಂತೆ ಗೋಚರ ವಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಮೇಲ್ದರ್ಜೆಗೇರಿಸುವ ಭರವಸೆಗಳು ಹುಸಿಯಾಗುವದ ರೊಂದಿಗೆ ಓರ್ವ ದಂತ ವೈದ್ಯ ಸೇರಿದಂತೆ ಆರು ಜನ ತಜ್ಞ ವೈದ್ಯರು ಕಾರ್ಯನಿರ್ವಹಿಸಬೇಕಾದ ಆಸ್ಪತ್ರೆಯಲ್ಲಿ ವೈದ್ಯರ ತಾತ್ಕಾಲಿಕ ಸೇವೆ ಹೊರತಾಗಿ ಖಾಯಂ ವೈದ್ಯರು ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಮಹಿಳಾ ತಜ್ಞರಲ್ಲದೆ ಇನ್ನೋರ್ವ ಮಹಿಳಾ ಆಯುರ್ವೇದ ವೈದ್ಯರು ಬಿಟ್ಟರೆ ಉಳಿದಂತೆ ನೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ನಿಯೋಜನೆಗೊಳ್ಳುವ ವೈದ್ಯರು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ತಪಾಸಣೆ ಮಾಡಬೇಕಾಗಿದೆ.

ಕುಶಾಲನಗರ ಸುತ್ತಮುತ್ತ ಶಿರಂಗಾಲ ಹೆಬ್ಬಾಲೆ, ನಂಜರಾಯ ಪಟ್ಟಣ, ಸುಂಟಿಕೊಪ್ಪ ವ್ಯಾಪ್ತಿ ಸೇರಿದಂತೆ 15 ಕಿ.ಮೀ. ವ್ಯಾಪ್ತಿಯೊಳಗಿನ 5 ಆರೋಗ್ಯ ಸಮುದಾಯ ಕೇಂದ್ರಗಳಿವೆ. ಕೊಪ್ಪ ಮತ್ತು ಬೈಲುಕೊಪ್ಪೆ ವ್ಯಾಪ್ತಿಯಲ್ಲಿ ಕೂಡ 2 ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿದ್ದರೂ ಸೂಕ್ತ ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಹೆಚ್ಚಿನ ಸಂಖ್ಯೆಯ ರೋಗಿಗಳು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಬರುವದು ವಾಡಿಕೆ. ವೈದ್ಯರ ಕೊರತೆಯೊಂದಿಗೆ ಇರುವ ವೈದ್ಯರು ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇಲ್ಲಿದೆ. ಕುಶಾಲನಗರ ಆಸ್ಪತ್ರೆಗೆ ಕಳೆದ ಕೆಲವು ಸಮಯದಿಂದ ನೆರೆಯ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿಯೋಜನೆ ಮಾಡುವದು ಇತ್ತೀಚಿನ ಬೆಳವಣಿಗೆಯಾಗಿದ್ದು, ಈ ಮೂಲಕ ಆಯಾ ಗ್ರಾಮಗಳ ರೋಗಿಗಳು ಕೂಡ ಅತಂತ್ರ ಸ್ಥಿತಿಗೆ ಒಳಗಾಗುವಂತಾಗಿದೆ.

ದಿನನಿತ್ಯ 500ಕ್ಕೂ ಅಧಿಕ ಹೊರರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಇದರೊಂದಿಗೆ ವೈದ್ಯರ ಅಲಭ್ಯತೆ ಯೊಂದಿಗೆ ಆಗಾಗ್ಗೆ ಸಿಬ್ಬಂದಿ ಗಳೊಂದಿಗೆ ರೋಗಿಗಳ ಕಡೆಯವರು ಘರ್ಷಣೆಗೆ ಇಳಿಯುವದು ಸಾಮಾನ್ಯ ವಾಗಿದೆ. ರಾತ್ರಿ ವೇಳೆ ಕೆಲವರು ಕುಡಿದ ಮತ್ತಿನಲ್ಲಿ ಬಂದು ದಾದಿಯರ ಜೊತೆ ಅತಿರೇಕದಲ್ಲಿ ವರ್ತಿಸುತ್ತಿರುವದು ನಿರಂತರ ಸಮಸ್ಯೆಯಾಗಿದೆ.

50 ಹಾಸಿಗೆಗಳುಳ್ಳ ಒಳರೋಗಿಗಳ ವಿಭಾಗ ಮಾತ್ರ ಬಹುತೇಕ ಬಿಕೋ ಎನ್ನುತ್ತಿರುವ ದೃಶ್ಯ ಗೋಚರಿಸುತ್ತಿದೆ. ಆಸ್ಪತ್ರೆಯ ಬೆರಳೆಣಿಕೆ ವೈದ್ಯರು ರೋಗಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಪ್ರಥಮ ಚಿಕಿತ್ಸೆ ನೀಡಿ ದೊಡ್ಡ ಆಸ್ಪತ್ರೆಗೆ ಕಳುಹಿಸಿಕೊಡುತ್ತಿರುವದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ತಜ್ಞ ವೈದ್ಯರ ಅಲಭ್ಯತೆಯಿಂದ ಯಾವದೇ ರೋಗಿಗಳು ಈ ಆಸ್ಪತ್ರೆಯಲ್ಲಿ ದಾಖಲಾಗಲು ಹಿಂಜರಿಯುವಂತಹ ಪರಿಸ್ಥಿತಿ ಉಂಟಾಗಿದೆ. ಹೆದ್ದಾರಿ ರಸ್ತೆಗಳಲ್ಲಿ ದಿನನಿತ್ಯ ಅಪಘಾತ ಸಂಭವಿಸುವದರೊಂದಿಗೆ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಆಗಮಿಸುವ ಗಾಯಾಳುಗಳು ದೊಡ್ಡಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಬೇಕಾದ ದುಸ್ಥಿತಿ ಇತ್ತೀಚಿನದ್ದಾಗಿದೆ. ಹೃದ್ರೋಗಿಗಳಂತೂ ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ.

ವಿಶೇಷವೆಂದರೆ ಈ ಆಸ್ಪತ್ರೆಯಲ್ಲಿ ಕಾಯಕದಲ್ಲಿರುವ ನೌಕರರು ಅನಾರೋಗ್ಯ ಸಂದರ್ಭ ಚಿಕಿತ್ಸೆ ಪಡೆಯಬೇಕೆಂದರೆ ಸ್ಥಳೀಯ ಖಾಸಗಿ ವೈದ್ಯರ ಬಳಿ ತೆರಳುವ ಅನಿವಾರ್ಯತೆ ಇಲ್ಲಿಯದ್ದಾಗಿದೆ ಎಂದರೆ ಪರಿಸ್ಥಿತಿ ಯಾವ ಮಟ್ಟಕ್ಕಿದೆ ಎಂದು ತಿಳಿಯಬಹುದು...!

ಶುಚಿತ್ವದ ಕೊರತೆ ಆಸ್ಪತ್ರೆಯಲ್ಲಿ ತಾಂಡವವಾಡುತ್ತಿದ್ದು, ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿರುವ ನಾಡಕಚೇರಿ, ಪೊಲೀಸ್ ಕಚೇರಿ ಸಮುಚ್ಛಯಗಳಿಗೆ ದಿನನಿತ್ಯ ತೆರಳುವ ನೂರಾರು ನಾಗರಿಕರು ಈ ಆಸ್ಪತ್ರೆ ಕಟ್ಟಡವನ್ನು ಸಾರ್ವಜನಿಕ ಶೌಚಾಲಯ ದಂತೆ ಬಳಸಿಕೊಳ್ಳುವದು ಬೆಳವಣಿಗೆ ಯಾಗಿದೆ. ಪೊಲೀಸ್ ಕಚೇರಿ, ನಾಡಕಚೇರಿ ಆವರಣದಲ್ಲಿ ಯಾವದೇ ಶೌಚಾಲಯಗಳಾಗಲಿ ಇಲ್ಲದಿರುವದು ಇದಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಬೀದಿ ನಾಯಿಗಳು ಆಪರೇಷನ್ ಥಿಯೇಟರ್‍ಗೆ ನುಗ್ಗಿ ಮಗುವೊಂದರ ಭ್ರೂಣವನ್ನು ಎತ್ತಿಕೊಂಡು ಹೋದ ಪ್ರಕರಣ ಇನ್ನೂ ಹಸಿರಾಗಿಯೇ ಇದೆ. ಆಸ್ಪತ್ರೆಗೆ ಮಹಿಳೆಯರು, ಮಕ್ಕಳು ಅಥವಾ ಅಪಘಾತಕ್ಕೆ ಒಳಗಾದ ಪ್ರಕರಣಗಳು ಚಿಕಿತ್ಸೆಗೆ ಬಂದಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲು ಹಿಂಜರಿಯುವದರೊಂದಿಗೆ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ಯುವಂತೆ ಆಸ್ಪತ್ರೆಯಲ್ಲಿ ಇರುವ ವೈದ್ಯರುಗಳು ಶಿಫಾರಸ್ಸು ಮಾಡುವದು ಮಾಮೂಲಿ ಯಾಗಿದ್ದು, ಇದು ಬಡರೋಗಿಗಳಿಗೆ ನುಂಗಲಾರದ ತುತ್ತಾಗಿದೆ. ರೋಗಿಗಳು ಚಿಕಿತ್ಸೆಗೆ ದಾಖಲಾಗಿ ವಿಷಮ ಸ್ಥಿತಿ ಉಂಟಾದಾಗ ಆಸ್ಪತ್ರೆಯಲ್ಲಿ ವೈದ್ಯರ ಉಪಸ್ಥಿತಿ ಇಲ್ಲದಿರುವದು, ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ನೀಡಬೇಕಾದ ಸಿರಿಂಜು ಸೇರಿದಂತೆ ಔಷಧಿಗಳನ್ನು ಕೂಡ ಹೊರಭಾಗದ ಔಷಧಿಗಳ ಅಂಗಡಿಗಳಿಂದ ಖರೀದಿಸಲು ಶಿಫಾರಸು ಮಾಡುವದು, ಈ ಮೂಲಕ ರೋಗಿಗಳಲ್ಲಿ ಸಮರ್ಪಕ ಚಿಕಿತ್ಸೆ ನೀಡುವಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆ ಸಂಪೂರ್ಣ ವಿಫಲವಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ.

ರೋಗಿಗಳ ಕಡೆಯವರ ಹಾವಳಿಯಿಂದ ವೈದ್ಯರು ಹಾಗೂ ದಾದಿಯರು ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿ ಆಗಾಗ್ಯೆ ಸೃಷ್ಟಿಯಾಗು ತ್ತಿರುವದು ಸಾಮಾನ್ಯವಾಗಿದೆ. ಇನ್ನುಳಿದಂತೆ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರ ಹುದ್ದೆ ಖಾಲಿಬಿದ್ದು ಹಲವು ಸಮಯವಾಗಿದೆ. ಕಳೆದ ಎರಡು ದಶಕಗಳ ಹಿಂದೆ ಇದ್ದಷ್ಟೇ ಸಂಖ್ಯೆಯ ದಾದಿಯರು ದಿನದ 24 ಗಂಟೆ ದುಡಿಯಬೇಕಾದ ಪರಿಸ್ಥಿತಿ ಇಲ್ಲಿಯದ್ದಾಗಿದೆ. ಸಿಬ್ಬಂದಿಗಳಿಗೆ ಹಾಗೂ ವೈದ್ಯರುಗಳಿಗೆ ಆಸ್ಪತ್ರೆಯಲ್ಲಿ ರಕ್ಷಣೆಯ ಕೊರತೆ ಕೂಡ ಎದ್ದು ಕಾಣುತ್ತಿದೆ. ರೋಗಿಗಳ ಜೊತೆಗೆ ಬರುವ ಸಹಾಯಕರನ್ನು ಸಂಭಾಳಿಸುವಲ್ಲಿ ಸಂಕಷ್ಟ ಎದುರಾಗುವದು ಸಾಮಾನ್ಯ ದೃಶ್ಯ.

ಇನ್ನೊಂದೆಡೆ ಭದ್ರತೆಯ ಕೊರತೆ ಹಿನ್ನಲೆಯಲ್ಲಿ ಅನಾಮಿಕರು ಆಸ್ಪತ್ರೆಯ ಒಳರೋಗಿಗಳ ಬೆಡ್‍ನಲ್ಲಿ ರಾತ್ರಿ ವೇಳೆ ಅಕ್ರಮವಾಗಿ ತಂಗುವದರೊಂದಿಗೆ ಮರುದಿನ ತೆರಳುತ್ತಿರುವ ಪ್ರಕರಣಗಳು ನಡೆದಿವೆ ಎನ್ನುತ್ತಾರೆ ಆಸ್ಪತ್ರೆಯ ಸಿಬ್ಬಂದಿಗಳು.

ಇರುವ ಭದ್ರತಾ ಸಿಬ್ಬಂದಿ ಭದ್ರತೆಯ ಕೊರತೆಯೊಂದಿಗೆ ಆಗಾಗ್ಯೆ ಪೊಲೀಸ್ ಠಾಣೆಗೆ ತೆರಳಿ ಭದ್ರತೆ ಕಲ್ಪಿಸಿಕೊಳ್ಳುವ ಸ್ಥಿತಿ ಈ ಸರಕಾರಿ ಆಸ್ಪತ್ರೆಯದ್ದಾಗಿದೆ. ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಇದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆರೋಗ್ಯ ಇಲಾಖೆಯ ಕಾರ್ಯಕ್ರಮ ಗಳು ಮಾತ್ರ ನಾಮಕಾವಸ್ಥೆಗೆ ನಡೆಯುತ್ತಿರುವದು ಸಾಮಾನ್ಯವಾಗಿದೆ.

ಕುಶಾಲನಗರ ಸರಕಾರಿ ಆಸ್ಪತ್ರೆಯ ಮೇಲ್ವಿಚಾರಣೆ ನಡೆಸುವ ಬಗ್ಗೆ ಯಾರೊಬ್ಬರೂ ಕಾಳಜಿ ವಹಿಸದಿರುವದೇ ಈ ಎಲ್ಲಾ ಅವಾಂತರಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಸಮಾಜ ಸೇವಕಿ ಹೆಲೆನ್ ಮೆಟಿಲ್ಡಾ. ಸರಕಾರದ ಸಂಪೂರ್ಣ ನಿರ್ಲಕ್ಷ್ಯ ಮೂಲಕ ಸ್ಥಳೀಯ ರೋಗಿಗಳು ತಮ್ಮ ಜೀವ ಉಳಿಸಲು ದೂರದ ಮೈಸೂರು, ಮಡಿಕೇರಿ, ಮಂಗಳೂರು ಆಸ್ಪತ್ರೆಗಳಿಗೆ ದಾಖ ಲಾಗುವ ಪರಿಸ್ಥಿತಿ ಇಲ್ಲಿಯದ್ದಾಗಿದೆ ಎಂದು ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ವೈದ್ಯರ ನೇಮಕ ಭರವಸೆ ನೀಡಿದರೂ ಇನ್ನೂ ಈಡೇರಿಲ್ಲ.

ಒಟ್ಟಾರೆ ಕುಶಾಲನಗರ ಸರ್ಕಾರಿ ಆಸ್ಪತ್ರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಮೇಲಾಟದೊಂದಿಗೆ, ನಿರ್ಲಕ್ಷ್ಯದ ನಡುವೆ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಮೇಜರ್ ಸರ್ಜರಿ ಮಾಡುವದ ರೊಂದಿಗೆ ಸರ್ಕಾರ ಬಡರೋಗಿಗಳ ಸೇವೆಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಅಗತ್ಯ ತಜ್ಞ ವೈದ್ಯರ ಮತ್ತು ದಾದಿಯರ ನೇಮಕ ಮಾಡುವದ ರೊಂದಿಗೆ ಕುಶಾಲನಗರ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸಬೇಕಾಗಿದೆ.

- ಚಂದ್ರಮೋಹನ್