ಸುಂಟಿಕೊಪ್ಪ, ಜೂ.15: ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಸಂಖ್ಯೆಯ ಫಲಕ ಅಳವಡಿಸಲು ಸರ್ವೆ ಕಾರ್ಯ ಮಾಡುತ್ತಿರುವ ಖಾಸಗಿ ಸಂಸ್ಥೆಯೊಂದು ಇಲ್ಲಿನ ನಿವಾಸಿಗಳಿಂದ ಹೆಚ್ಚುವರಿ ಹಣವನ್ನು ಪಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಯಂ ಮನೆಗಳ ಸರ್ವೆ ಮಾಡಿ, ಮಾಹಿತಿ ಪಡೆಯುವ ಬಗ್ಗೆ ಸಂಬಂಧಿಸಿದ ಮನೆಗಳ ನಿವಾಸಿಗಳಿಂದ ರೂ.30 ಅನ್ನು ಸಂಗ್ರಹ ಮಾಡಿ ರಶೀದಿ ನೀಡುವದಾಗಿ ಸರ್ಕಾರಕ್ಕೆ ಖಾಸಗಿ ಸಂಸ್ಥೆ ಎಸ್.ಬಿ.ನಂಬರಿಂಗ್ ಪ್ರೈ ಲಿಮಿಟೆಡ್ ತಿಳಿಸಿ ಸರ್ವೆ ಕಾರ್ಯ ಕೈಗೆತ್ತಿಕೊಂಡಿದೆ. ಸರ್ಕಾರದ ಆದೇಶದಂತೆ ಆ ಸಂಸ್ಥೆಯವರು ಮನೆಗಳಿಗೆ ಭೇಟಿ ನೀಡಿದಾಗ ರೂ. 30 ಹಣವನ್ನು ಪಡೆದು ರಶೀದಿ ಪಡೆಯುವದರೊಂದಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.

ಆದರೆ ಈ ಖಾಸಗಿ ಸಂಸ್ಥೆಯು ಆ ಆದೇಶ ಉಲ್ಲಂಘಿಸಿ ಪ್ರತಿ ಮನೆಯಿಂದ ರೂ.40 ನ್ನು ಪಡೆದು ರೂ. 30ಕ್ಕೆ ಮಾತ್ರ ರಶೀದಿಯನ್ನು ನೀಡುತ್ತಿರುವದನ್ನು ಇಲ್ಲಿನ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಸುಂಟಿಕೊಪ್ಪ ಬಿಜೆಪಿ ನಗರಾಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಹಾಗೂ ಇತರರು ಖಂಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.