ಸುಂಟಿಕೊಪ್ಪ, ಜೂ. 15: ಮಾದಕ ವ್ಯಸನದಿಂದ ದೂರವಿದ್ದು, ಸತ್ಪ್ರಜೆಗಳಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಕುಶಾಲನಗರ ವೃತ್ತ ನಿರೀಕ್ಷಕ ಖ್ಯಾತೆಗೌಡ ಹೇಳಿದರು.

ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಆರಕ್ಷಕ ಠಾಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ‘ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ. ಅದನ್ನು ಮಾಡುವದು ಕ್ರಿಮಿನಲ್ ಅಪರಾಧವಾಗಿದ್ದು, ಅದು ಬದುಕನ್ನೇ ಸರ್ವನಾಶಗೊಳಿಸುತ್ತದೆ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸುಂಟಿಕೊಪ್ಪ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಮಾತನಾಡಿ, ವಿದ್ಯಾರ್ಥಿಗಳು ಇಂದು ಮಾದಕ ವ್ಯಸನ ಚಟುವಟಿಕೆಗಳಿಗೆ ಬಲಿಯಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾರ್ಜುವಾನ ಎಂಬ ಸಸ್ಯದಿಂದ ಲಭ್ಯವಾಗುವ ದ್ರವ್ಯವು ಶೇ. 70 ಭಾಗ ಕ್ಯಾನ್ಸರನ್ನು ಉಂಟುಮಾಡುತ್ತದೆ. ಗಾಂಜಾ, ಅಫೀಮು, ಹೆರಾಯಿನ್ ಮುಂತಾದವುಗಳು ನಮ್ಮ ದೇಹದ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ. ಅಲ್ಲದೇ ಮಾದಕ ವ್ಯಸನಕ್ಕೆ ತುತ್ತಾದವರು ಖಿನ್ನತೆಗೆ ಒಳಗಾಗುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಸೋಮಚಂದ್ರ, ಮಾದಕ ದ್ರವ್ಯ ಕ್ಷಣ ಕಾಲ ಸಂತೋಷವನ್ನು ನೀಡುತ್ತದೆ ಅಷ್ಟೆ. ಒಮ್ಮೆ ವ್ಯಕ್ತಿಯೊಬ್ಬ ಮಾದಕ ವ್ಯಸನಕ್ಕೆ ಬಲಿಯಾದರೆ ಆತನನ್ನು ಮತ್ತೇ ಪುನ; ಸಹಜ ವ್ಯಕ್ತಿಯಾಗಿ ಮಾಡಲು ಸಾಧ್ಯವಿಲ್ಲ. ಮಾದಕ ವ್ಯಸನಿಗಳು ಜೀವಂತ ಶವವಿದ್ದ ಹಾಗೆ, ಬದುಕಿದ್ದು ಸಮಾಜಕ್ಕೆ ಮತ್ತು ಸಂಸಾರಕ್ಕೆ ಕಂಟಕಪ್ರಾಯರಾಗುತ್ತಾರೆ. ಸಮಾಜ ಘಾತುಕ ಚಟುವಟಿಕೆಗಳಿಗೆ ಸುಲಭವಾಗಿ ಬಲಿಯಾಗುತ್ತಾರೆ ಎಂದರು.

ವೇದಿಕೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಬೋಜಪ್ಪ, ರಸಾಯನ ಶಾಸ್ತ್ರ ಉಪನ್ಯಾಸಕ ಎಸ್.ಹೆಚ್. ಈಸ ಉಪಸ್ಥಿತರಿದ್ದರು.