ಸೋಮವಾರಪೇಟೆ, ಜೂ.15: ವಿಶ್ವ ಯೋಗದಿನವನ್ನು ಸೋಮವಾರಪೇಟೆಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ, ಆರ್ಟ್ ಆಫ್ ಲಿವಿಂಗ್‍ನ ಸಂಚಾಲಕಿ ರಾಗಿಣಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.ತಾ. 21ರಂದು ಇಲ್ಲಿನ ಒಕ್ಕಲಿಗರ ಸಮುದಾಯಭವನದಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಯೋಗ ದಿನಾಚರಣೆ ನಡೆಯಲಿದ್ದು, ಇದಕ್ಕೆ ಪೂರ್ವ ಸಿದ್ಧತೆಯಾಗಿ ತಾ. 17ರಂದು ನಗರದಲ್ಲಿ ಯೋಗ ಜಾಥಾ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾ. 17ರಂದು ಬೆಳಿಗ್ಗೆ 9.30ಕ್ಕೆ ಇಲ್ಲಿನ ಜೇಸೀ ವೇದಿಕೆಯಿಂದ ಜಾಥಾ ಪ್ರಾರಂಭಿಸಿ ನಗರದ ಮುಖ್ಯ ಮಾರ್ಗಗಳಲ್ಲಿ ಸಾಗಿ ಯೋಗದ ಮಹತ್ವದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಜಿಲ್ಲೆಯಲ್ಲಿ ಆರ್ಟ್ ಆಫ್ ಲಿವಿಂಗ್‍ನ

(ಮೊದಲ ಪುಟದಿಂದ) ಸಹಯೋಗದೊಂದಿಗೆ ಯೋಗ ದಿನಾಚರಣೆ ಆಯೋಜಿಸುವ ಬಗ್ಗೆ ಸರ್ಕಾರದ ನಿರ್ದೇಶನ ಬಂದಿದ್ದು, ಜಿಲ್ಲಾ ಕೇಂದ್ರ ಸೇರಿದಂತೆ ತಾಲೂಕು ಮಟ್ಟದಲ್ಲಿ ಯೋಗ ದಿನ ಆಚರಿಸಲಾಗುವದು ಎಂದು ಆಯುಷ್ ಇಲಾಖೆಯ ಅಧಿಕಾರಿ ರಾಮಚಂದ್ರ ತಿಳಿಸಿದರು.

ಅಂತರಾಷ್ಟ್ರೀಯ ಯೋಗ ದಿನವನ್ನು ಕಳೆದ ವರ್ಷವೂ ಆರ್ಟ್ ಆಫ್ ಲಿವಿಂಗ್‍ನಿಂದ ಅರ್ಥಪೂರ್ಣ ವಾಗಿ ಆಚರಿಸಿದ್ದು, ಪ್ರಸಕ್ತ ವರ್ಷ ಸರ್ಕಾರದೊಂದಿಗೆ ಸಂಸ್ಥೆಯು ಕೈಜೋಡಿಸಲಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದರು. ತಾ.ಪಂ. ಕಾರ್ಯನಿರ್ವ ಹಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಯೋಗ ದಿನಾಚರಣೆ ಆಯೋಜಿಸಬೇಕು. ಅಭಿವೃದ್ಧಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ಯೋಗದ ಮಹತ್ವದ ಬಗ್ಗೆ ತಿಳಿಸಬೇಕು ಎಂದರು. ಸಭೆಯಲ್ಲಿ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್. ಮಹೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಶಿವಪ್ಪ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಆರ್ಟ್ ಆಫ್ ಲಿವಿಂಗ್‍ನ ಸದಸ್ಯರುಗಳು ಭಾಗವಹಿಸಿದ್ದರು.