ಗೋಣಿಕೊಪ್ಪಲು, ಜೂ. 15: ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗದಿದ್ದರೆ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಶ್ರೀಮಂಗಲ ಹೋಬಳಿ ಬೆಳೆಗಾರರ ಸಂಘದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಶ್ರೀಮಂಗಲ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಅಧ್ಯಕ್ಷತೆಯಲ್ಲಿ ಅಲ್ಲಿನ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಅರಣ್ಯ ಇಲಾಖೆ ಸಾರ್ವಜನಿಕರಿಗೆ ಕಾಡಾನೆಗಳಿಂದ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದೆ ಬರುತ್ತಿಲ್ಲ. ತಾತ್ಕಾಲಿಕ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವದು ಕೃಷಿಕರಿಗೆ ಹೆಚ್ಚು ನಷ್ಟ ಉಂಟಾಗುತ್ತಿದೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಶ್ರೀಮಂಗಲ, ಕುರ್ಚಿ, ಬೀರುಗ, ಕುಟ್ಟ, ಬಾಡಗ, ಮಂಚಳ್ಳಿ ಗ್ರಾಮಗಳಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಇದೆ. ರೈಲ್ವೆ ಕಂಬಿಗಳ ಬದಲಾಗಿ ಸೋಲಾರ್ ತಂತಿ ಹಾಕುವ ಮೂಲಕ ತಾತ್ಕಾಲಿಕ ಪರಿಹಾರಕ್ಕೆ ಮುಂದಾಗಿರುವದನ್ನು ಖಂಡಿಸಲಾಯಿತು. ಕೂಡಲೇ ರೈಲ್ವೆ ಕಂಬಿಗಳನ್ನು ಬಳಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತೋಟಗಳಲ್ಲಿ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳಿಗೆ ತೆರಳಲು ವಿದ್ಯಾರ್ಥಿಗಳು ಭಯಪಡುವ ವಾತಾವರಣ ಉಂಟಾಗಿದೆ ಎಂದು ಗ್ರಾಮಸ್ತರು ಹೇಳಿದರು.

ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಜಿಲ್ಲಾಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಪದಾಧಿಕಾರಿಗಳಾದ ಎಂ.ಕೆ. ಮುತ್ತಪ್ಪ, ಬಿ.ಪಿ. ದೇವಯ್ಯ, ಬಿ.ಎನ್. ಅಶೋಕ್ ಹಾಗೂ ನಂಜಪ್ಪ ಪಾಲ್ಗೊಂಡಿದ್ದರು.